ಶಿವಮೊಗ್ಗ: ರಾಷ್ಟ್ರೀಯ ನಾಯಕ ಹಾಗೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಅವರ ಧ್ವನಿ ಹತ್ತಿಕ್ಕಲು ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜು.೧೨ರಂದು ಬೆಳಿಗ್ಗೆ ೧೦ರಿಂದ ಸಂಜೆ ೫ರವೆರಗೆ ಗಾಂಧಿಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದಮೌನ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು.

ಅವರು ಪಕ್ಷದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ಗಾಂಧಿಯವರಿಗೆ ಇವರು ಜನಬೆಂಬಲ ಸಹಿಸದೆ ಹತಾಶರಾಗಿರುವ ಬಿಜೆಪಿ ನಾಯಕರಿಗೆ ರಾಜ್ಯದ ಜನ ಹೇಗೆ ಅವರಿಗೆ ಪಾಠ ಕಲಿಸಿದ್ದಾರೋ ಅದೇರೀತಿ ದೇಶದ ಜನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಅದುಮಿ ಹಾಕಲು ಬಿಜೆಪಿ ಸಕಲ ಪ್ರಯತ್ನದ ಒಳಸಂಚು ಮಾಡುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ರಾಹುಲ್ಗಾಂಧಿ ಅವರನ್ನು ದೋಷಿ ಎಂದು ಸಾಬೀತುಪಡಿಸಲು ಹಾಗೂ ಅವರನ್ನು ಲೋಕಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಲು ಕಾರಣವಾಗುವ ಎಲ್ಲಾ ಸೇಡಿನ ಕ್ರಮಗಳನ್ನ ಅನುಸರಿಸುತ್ತಿದೆ. ಇಷ್ಟೆಲ್ಲಾ ಅಡಚಣೆಗಳ ನಡುವೆಯೂ ಪಕ್ಷದ ನಾಯಕರು ಜನರ ಒಳಿತಿಗಾಗಿ, ನ್ಯಾಯ-ಸತ್ಯಕ್ಕಾಗಿ, ಜನರ ಸಮಸ್ಯೆಗಳನ್ನು ಎತ್ತಿಹಿಡಿಯಲು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದರು.

ರಾಹುಲ್ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹತೆಯನ್ನು ಕಾಂಗ್ರೆಸ್ ಮಾತ್ರವಲ್ಲ. ಇಡೀ ರಾಷ್ಟ್ರವೇ ಖಂಡಿಸುತ್ತಿದೆ. ಮತ್ತ ಅವರ ಜನಪರ ಹೋರಾಟದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಒಟ್ಟಾಗಿ ನಿಂತು ರಾಹುಲ್ ಗಾಂಧಿ ಅವರು ಏಕಾಂಗಿಯಲ್ಲ. ಅಪಾರಕಾಂಗ್ರೆಸ್ಸಿಗರ ಬಳಗ ಮತ್ತು ಕೋಟ್ಯಂತರ ಜನರು ಅವರ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಸತ್ಯ ಮತ್ತ ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಲು ದೇಶಾದ್ಯಂತ ಅಂದು ಮೌನ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುವ ವಿರೋಧ ಪಕ್ಷಗಳ ನಾಯಕರ ವಿರುದ್ಧ ಸಿಬಿಐ, ಇಡಿಯಂತಹ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಭ್ರಷ್ಟಾಚಾರದ ಕೋಟ್ಯಂತರ ರೂ. ಅನ್ನು ಬಿಜೆಪಿ ತನ್ನ ಸ್ವಂತ ಹಾಗೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೋ ಎಂಬ ಭಯದಲ್ಲಿ ಬಿಜೆಪಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಲ್ಲಸಲ್ಲದ ಕಿರುಕುಳ ನೀಡಿ ಮಾನಸಿಕ ಸ್ಥೈರ್ಯ ಕುಗ್ಗಿಸುತ್ತಿದೆ. ಇವರಿಗೆ ಬೆಂಬಲ ನೀಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷದ ನಾಯಕರು ಒಗ್ಗಟ್ಟಿನ, ನಿರ್ಭೀತ ಮತ್ತು ರಾಜಿರಹಿತ ಹೋರಾಟವನ್ನು ಬೆಂಬಲಿಸಿ ಮೌನಸತ್ಯಾಗ್ರಹವನ್ನ ಹಮ್ಮಿಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ೨ ತಿಂಗಳಾದರೂ ಸಹ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ನೇಮಿಸಿಲ್ಲ ಎಂದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೆಹಕ್ ಶರೀಫ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ, ಮುಖಂಡರಾದ ಟಿ. ಕೃಷ್ಣಪ್ಪ ಮಂಜುನಾಥಬಾಬು, ಸಿ.ಎಸ್. ಚಂದ್ರಭೂಪಾಲ, ವಿನಾಯಕ ಮೂರ್ತಿ, ಹೆಚ್.ಎಂ. ಮಧು, ಚಂದನ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.