ಶ್ರೀನಿಧಿಯ ಅಶ್ವತಣ್ಣನವರಿಂದ ಚಾಲನೆ

ಶಿವಮೊಗ್ಗ,
ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಪರಿಸರ ಪೂರಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಮಾಸ್ಟರ್ ರೋಹನ್ ಶಿರಿಯವರ ಸಾರಥ್ಯದ ಯೂನಿವರ್ಸಲ್ ನಾಲೇಜ್ ಸಂಸ್ಥೆಯ ಮತ್ತೊಂದು ಮಹೋನ್ನತ ಕಾರ್ಯ 'ಫುಡ್ ಆನ್ ವಾಲ್' ಇದೀಗ ಶಿವಮೊಗ್ಗದಲ್ಲಿ ಪ್ರಾರಂಭವಾಗಿದೆ. 



ಶ್ರೀನಿಧಿ ಸಿಲ್ಕ್ & ಟೆಕ್ಸ್ ಟೈಲ್  ಮಾಲಿಕರು ಹಾಗೂ ಸಮಾಜ ಸೇವಾಕರ್ತರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಯವರು ದುರ್ಗಿಗುಡಿಯ ಮಲ್ಲಿಕಾರ್ಜುನ ಚಿತ್ರಮಂದಿರದ ಬಳಿ ಇರುವ ಕೌಸ್ತುಭ ಹೊಟೆಲ್ ನಲ್ಲಿ ಅಗತ್ಯವಿರುವವರಿಗೆ ಊಟದ ಟೋಕನ್ ವಿತರಿಸುವ ಮೂಲಕ ಅನಾವರಣಗೊಳಿಸಿದರು.
'ಫುಡ್ ಆನ್ ವಾಲ್' ಎಂಬ ಪರಿಕಲ್ಪನೆಯ ಮೂಲಕ ಅಗತ್ಯವಿರುವವರಿಗೆ ಉಚಿತ ಆಹಾರ ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು ಅಕ್ಕಪಕ್ಕದ ಹಳ್ಳಿಗಳಿಂದ, ಪರ ಊರುಗಳಿಂದ ನಿತ್ಯ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗಳಿಗಾಗಿ ನಗರಕ್ಕೆ ಬರುವವರು ಹೀಗೆ ಯಾರೇ ಇರಬಹುದು.
ಕೆಲ ಸಮಯ ಊಟ ಮಾಡಲೂ ಸಹ ಹಣವಿಲ್ಲದ ಸಂದರ್ಭಗಳು ಎದುರಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ ಯಾರನ್ನೂ ಬೇಡುವ ಮನಸ್ಸಿಲ್ಲದೇ ಉಪವಾಸವಿದ್ದೇ ಕೆಲಸ ಪೂರೈಸಿಕೊಂಡು ತಮ್ಮ ಮನೆಗಳಿಗೆ ತೆರಳುವ ಉದಾಹರಣೆಗಳು ನಿತ್ಯ ನಡೆಯುತ್ತಿರುತ್ತವೆ. ಹಸಿವು ಎಂಬುದು ಬಡವ ಹಾಗೂ ಶ್ರೀಮಂತನೆಂಬ ಬೇಧ ಭಾವ ನೋಡದೇ ಸಮಾನತೆಯಿಂದ ಎಲ್ಲರನ್ನೂ ನೋಡುತ್ತದೆ. 
ಈ ಕಾರಣಕ್ಕಾಗಿ ಯಾವುದೇ ರೀತಿಯಲ್ಲಿ ಯಾವುದೇ ವ್ಯಕ್ತಿಯನ್ನು ಹಸಿವು ಬಾಧಿಸಬಾರದು ಎಂಬ ಸದುದ್ದೇಶ ಹೊತ್ತು ಯೂನಿವರ್ಸಲ್ ನಾಲೇಜ್ ಸಂಸ್ಥೆಯು ಈ ಸತ್ಕಾರ್ಯಕ್ಕೆ ಚಾಲನೆ ನೀಡಿದೆ. ಹೊಟೆಲ್ ಆವರಣದಲ್ಲಿ ಇಟ್ಟಿರುವ ಫುಡ್ ಆನ್ ವಾಲ್ ಫಲಕದಲ್ಲಿ ಇಟ್ಟಿರುವ ಟೋಕನನ್ನು ಅಗತ್ಯವಿರುವವರು ಪಡೆದು ಹೊಟೆಲಿನಲ್ಲಿ ನೀಡಿ ಊಟ ಮಾಡಬಹುದಾಗಿದ್ದು ಯಾವುದೇ ಹಣವನ್ನು ಆ ಗ್ರಾಹಕ ನೀಡಬೇಕಿಲ್ಲ. ಆ ಹಣವನ್ನು ತಿಂಗಳಿಗೊಮ್ಮೆ ಹೊಟೆಲ್ ಮಾಲಿಕರ ಖಾತೆಗೆ ಟ್ರಸ್ಟ್ ವತಿಯಿಂದ ವರ್ಗಾಯಿಸಲಾಗುತ್ತದೆ.
2023 ಜನೆವರಿ 26 ರಿಂದ ಪ್ರಾರಂಭವಾದ ಈ ಯೋಜನೆಯು ಈಗಾಗಲೇ ಬೆಂಗಳೂರು, ಮಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಪುತ್ತೂರು ಗಳಲ್ಲಿ ಅನುಷ್ಠಾನಗೊಂಡು ಇದೀಗ ಏಳನೇಯದಾಗಿ ಶಿವಮೊಗ್ಗದಲ್ಲಿ ಪ್ರಾರಂಭವಾಗುತ್ತಿದೆ. 
ಈ ಯೋಜನೆಯ ಮೂಲಕ ಕೇವಲ ಐದು ತಿಂಗಳಲ್ಲಿ ಐದು ಸಾವಿರದ ಎಂಟು ನೂರಕ್ಕೂ ಅಧಿಕ ಊಟಗಳನ್ನು ವಿತರಿಸಲಾಗಿದೆ. ಒಡಂಬಡಿಕೆ ಮಾಡಿಕೊಂಡ ಆಸಕ್ತ ಹೊಟೆಲ್ ಮಾಲಿಕರೊಂದಿಗೆ ನಿರಂತರವಾಗಿ ಈ ಸೇವೆಯನ್ನು ಒದಗಿಸುವುದು ಯೂನಿವರ್ಸಲ್ ನಾಲೇಜ್ ಸಂಸ್ಥೆಯ ಉದ್ದೇಶವಾಗಿದೆ. ಸಾರ್ವಜನಿಕರೂ ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಲಾಗಿದ್ದು ತಮ್ಮ ಶಕ್ತ್ಯಾನುಸಾರ ಊಟಗಳನ್ನು ಪ್ರಾಯೋಜಿಸುವ ಮೂಲಕ ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬಹುದಾಗಿದೆ. 
ಸೇವಾ ಮನೋಭಾವವುಳ್ಳ ಹೊಟೆಲ್ ಮಾಲಿಕರು ತಾವೂ 'ಫುಡ್ ಆನ್ ವಾಲ್' ಕುರಿತು ಆಸಕ್ತಿ ಹೊಂದಿದ್ದಲ್ಲಿ ನಾಗರಾಜ ಶೆಟ್ಟರ್- 94481 39271 ಅಥವಾ ಯೂನಿವರ್ಸಲ್ ನಾಲೇಜ್- 96321 71156 ಸಂಪರ್ಕಿಸಬಹುದಾಗಿದೆ. 

ನಮ್ಮ ವೆಬ್ ವಿಳಾಸ: www.universalknowledge.in

By admin

ನಿಮ್ಮದೊಂದು ಉತ್ತರ

error: Content is protected !!