ಶಿವಮೊಗ್ಗ: ವಿದ್ಯೆಯ ಜೊತೆ ವಿನಯವನ್ನು ಕಲಿತುಕೊಳ್ಳಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಕ್ಕಳಿಗೆ ಕರೆ ನೀಡಿದರು.
ಅವರು ಇಂದು ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 30ನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಆದಿಚುಂಚನಗಿರಿ ಶಾಲೆ ರಾಜ್ಯದಲ್ಲಿಯೇ ಹೆಸರು ಮಾಡಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆ ಕಲಿತ ಮಕ್ಕಳು ಇಂದು ರಾಜ್ಯ ಮತ್ತು ರಾಷ್ಟ್ರಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ಧಾರೆ. ಐಎಎಸ್, ಐಪಿಎಸ್ ಪರೀಕ್ಷೆಗಳ ಪಾಸ್ ಮಾಡಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಹಾಗೂ ಸಿನೆಮಾ ಕ್ಷೇತ್ರಗಳಲ್ಲಿಯೂ ಹೆಸರು ಗಳಿಸಿದ್ದಾರೆ ಇದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದರು.
ಶಿವಮೊಗ್ಗ ಶಾಖಾ ಮಠದ ವ್ಯಾಪ್ತಿಯಲ್ಲಿ ಬರುವ ಹೈಸ್ಕೂಲ್ ಮತ್ತು ಪಿಯು ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಇಂದು ಅಭಿನಂದನೆ ಸಲ್ಲಿಸಲಾಗುತ್ತಿದೆ. ಸುಮಾರು 421ಮಕ್ಕಳು ಇಲ್ಲಿ ಪುರಸ್ಕಾರ ಪಡೆಯುತ್ತಿದ್ದಾರೆ. ಇದು ಹೆಮ್ಮೆಯ ವಿಷಯವಾಗಿದೆ. ರಾಜ್ಯದಲ್ಲಿ ನಮ್ಮ ಸಂಸ್ಥೆಯಲ್ಲಿ ಒಟ್ಟು 1.46 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಮಕ್ಕಳು ಸ್ವತಂತ್ರವಾಗಿ ಚಿಂತಿಸಬೇಕು. ಒಳ್ಳೆಯ ಆಲೋಚನೆ, ಒಳ್ಳೆಯ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಕೇವಲ ವಿದ್ಯೆ ಕಲಿತರೆ ಸಾಲದು, ಅದರ ಜೊತೆಗೆ ವಿನಯವೂ ಸೇರಿಕೊಳ್ಳಬೇಕು. ಹಾಗಾದಾಗ ಮಾತ್ರ ಅವರು ಸತ್ಪ್ರಜೆಗಳಾಗಲು ಸಾಧ್ಯ. ಅಂಕಗಳ ಒತ್ತಡವನ್ನು ನಮ್ಮ ಸಂಸ್ಥೆ ಹಾಕುವುದಿಲ್ಲ. ಆದರೆ ಮಕ್ಕಳು ಕಷ್ಟಪಟ್ಟು ಜೊತೆಗೆ ಇಷ್ಟಪಟ್ಟು ಓದುತ್ತಾರೆ. ಹಾಗಾಗಿಯೇ ರ‍್ಯಾಂಕ್ ಬರಲು ಸಾಧ್ಯವಾಗುತ್ತದೆ. ಸಾಧನೆಗೈದ ಎಲ್ಲ ಮಕ್ಕಳಿಗೂ ಸಂಸ್ಥೆ ಗೌರವಿಸುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತ್ರಿದಂಡಿ ವೆಂಕಟರಾಮಾನುಜ ಸ್ವಾಮೀಜಿ, ಆಡಳಿತಾಧಿಕಾರಿ ಎ.ಟಿ.ಶಿವರಾಮ್, ಜಗದೀಶ್, ವಿಜಯವಾಮನ, ಚಲನಚಿತ್ರ ನಿರ್ಮಾಪಕ ಹಾಗೂ ಹಳೆಯ ವಿದ್ಯಾರ್ಥಿ ಉಮಾಪತಿ ಸೇರಿದಂತೆ ಹಲವರಿದ್ದರು.