ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ ಶಾಲೆ ಆರಂಭವಾಗಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗಿನ ಮಹತ್ವದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಸದ್ಯಕ್ಕೆ ಶಾಲೆ ಆರಂಭವಿಲ್ಲ. ಶಾಲೆ ಆರಂಭದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ವಸತಿ ಶಾಲೆಗಳ ಆರಂಭ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎರಡು ದಿನಗಳಲ್ಲಿ ಸಿಎಂ ಗೆ ವರದಿ ನೀಡಲಾಗುವುದು. ಸಿಎಂ ನಿರ್ಧಾರದ ನಂತರ ಶಾಲೆ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ನೀತಿ ಸಂಹಿತೆ ಮುಗಿದ ನಂತರ ವರ್ಗಾವಣೆ
ಚುನಾವಣಾ ನೀತಿ ಸಂಹಿತಿ ಮುಗಿದ ನಂತರವೇ ಶಾಲಾ ಶಿಕ್ಷಕರ ಹಾಗೂ ಪಿಯು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸುತ್ತೇವೆ.
ಬಹಳ ದಿನಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬೇರೆ ಬೇರೆ ಕಾರಣದಿಂದ ಮುಂದೆ ಹೋಗುತಿತ್ತು. ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಇವತ್ತು ಎಲ್ಲವೂ ಚರ್ಚೆ ಮಾಡಿದ್ದೇವೆ. ಚುನಾವಣೆ ನೀತಿ ಸಂಹಿತೆ ಅವಧಿ ಮುಗಿದ ತಕ್ಷಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ವರ್ಗಾವಣೆ ಸಂಬಂಧಿಸಿದ ಪೂರ್ವಭಾವಿ ಕ್ರಮ ತೆಗೆದುಕೊಂಡಿದ್ದೇವೆ. ಪ್ರೌಢ, ಪಿಯು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಪಿಯು ಉಪನ್ಯಾಸಕರ ವರ್ಗಾವಣೆಗೂ ಮೊದಲು, ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ಮುಗಿಸಿ, ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.