ಸಾಗರ : ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಗೋಹತ್ಯೆ ಮತ್ತು ಗೋವಿನ ಮೇಲಿನ ಮಾರಣಾಂತಿಕ ಹಲ್ಲೆಯನ್ನು ತಡೆಗಟ್ಟುವಂತೆ ಒತ್ತಾಯಿಸಿ ಮಂಗಳವಾರ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳ ವತಿಯಿಂದ ನಗರ ಠಾಣೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಕೆ.ವಿ.ಪ್ರವೀಣ, ಕಾಂಗ್ರೇಸ್ ಅಧಿಕಾರಕ್ಕೆ ಬಂದ ಮೇಲೆ ಗೋಹತ್ಯೆ ಮಾಡುವವರಿಗೆ, ಗೋವನ್ನು ಕಳ್ಳತನ ಮಾಡುವವರಿಗೆ ದೊಡ್ಡ ಶಕ್ತಿ ಬಂದಿದೆ. ರಾಜ್ಯದ ಸಚಿವರೆ ಗೋಹತ್ಯೆ ಮಾಡಲು ಪ್ರೇರಣೆ ನೀಡುತ್ತಿದ್ದಾರೆ.

ಇಂತಹ ಸಂವಿಧಾನ ಬಾಹಿರ ಹೇಳಿಕೆಯಿಂದ ಗೋಹತ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ. ಸಾಗರ ತಾಲ್ಲೂಕಿನಲ್ಲಿ ಗೋಹತ್ಯೆ, ಗೋಹಿಂಸೆಗೆ ಅವಕಾಶ ಕೊಡುವುದಿಲ್ಲ. ಸರ್ಕಾರ ಬರುತ್ತದೆ ಹೋಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಗೋಹತ್ಯಾ ನಿಷೇದ ಕಾಯ್ದೆಯನ್ನು ವಾಪಾಸ್ ಪಡೆಯಬಾರದು. ಕ್ಷೇತ್ರದ ಶಾಸಕರಿಗೆ ಅತಿಹೆಚ್ಚು ಹಿಂದೂಗಳ ಮತ ನೀಡಿದ್ದಾರೆ. ತಕ್ಷಣ ಗೋಹತ್ಯೆ ಮಾಡುತ್ತಿರುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಾಸಕರು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.


ನ್ಯಾಯವಾದಿ ಕೆ.ಎಚ್.ಸುದರ್ಶನ್ ಮಾತನಾಡಿ, ಪೊಲೀಸರ ಕೈನಿಂದ ಗೋಹತ್ಯೆ ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಇದ್ದರೆ ನಾವು ಅದನ್ನು ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಗೋ ಸಂರಕ್ಷಣೆ ನಮ್ಮ ಆದ್ಯತೆ ಆಗಿದ್ದು ಅದಕ್ಕೆ ನೈತಿಕ ಪೊಲೀಸ್ ಗಿರಿ ಪಟ್ಟ ಕಟ್ಟಬಾರದು. ಕೆಲವು ಐಷಾರಾಮಿ ಕಾರಿನಲ್ಲಿ ಹಿಂಭಾಗದ ಸೀಟ್ ತೆಗೆದು ಗೋವನ್ನು ರಾತ್ರಿವೇಳೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ನಾಕಾಬಂಧಿ ರಚಿಸುವ ಮೂಲಕ ವಾಹನ ತಪಾಸಣೆ ಮಾಡಬೇಕು.

ಕೆಲವು ಗ್ರಾಮ ಪಂಚಾಯ್ತಿ ಪಿಡಿಓಗಳು ಜಾನುವಾರು ಸಾಗಾಣಿಕೆಗೆ ಪರವಾನಿಗೆ ನೀಡುತ್ತಿರುವುದು ಕಾನೂನುಬಾಹಿರವಾಗಿದೆ. ಪೊಲೀಸ್ ಮತ್ತು ಆರ್.ಟಿ.ಓ.ಗೆ ಇರುವ ಅಧಿಕಾರವನ್ನು ಪಿಡಿಓಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗೋ ಸಂರಕ್ಷಣೆಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ದರಿದ್ದು, ಮುಂದಿನ ಮೂರ‍್ನಾಲ್ಕು ದಿನಗಳಲ್ಲಿ ಗೋಹಂತಕರನ್ನು ಬಂಧಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಭಜರಂಗ ದಳದ ತಾಲ್ಲೂಕು ಸಂಚಾಲಕ ಸಂತೋಷ್ ಶಿವಾಜಿ ಮಾತನಾಡಿ, ಕಳೆದ ಮೂರ‍್ನಾಲ್ಕು ದಿನಗಳಲ್ಲಿ ಎರಡು ಮೂರು ಜಾನುವಾರುಗಳ ಮೇಲೆ ಕತ್ತಿ, ಮಚ್ಚು, ಲಾಂಗ್‌ನಿಂದ ಹಲ್ಲೆ ಮಾಡಲಾಗಿದೆ. ಯಾರೋ ಬೇಕಂತಲೆ ಇಂತಹ ಕೃತ್ಯ ಎಸಗುತ್ತಿದ್ದಾರೆ. ಪೊಲೀಸ್ ಇಲಾಖೆ ತಕ್ಷಣ ಗೋಹಂತಕರನ್ನು ಬಂಧಿಸದೆ ಹೋದಲ್ಲಿ ಭಜರಂಗ ದಳದ ವತಿಯಿಂದ ಸಾಗರ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನಂದೀಶ್ ಸೂರಗುಪ್ಪೆ, ಕಿರಣ್, ಆಟೋ ಗಣೇಶ್, ರಾಘವೇಂದ್ರ ಕಾಮತ್, ವಿಜಯಕುಮಾರ್, ನಾರಾಯಣಮೂರ್ತಿ, ಆದಿತ್ಯ, ಪುರುಷೋತ್ತಮ್ ಇನ್ನಿತರರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!