ಶಿವಮೊಗ್ಗ: ರೈತ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ, ಪ್ರತಿಬಂಧಕ ಮತತು ಸುರಕ್ಷತಾ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು. ರೈತ ಪರ ನೀತಿಗಳನ್ನು ರೂಪಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ೨೦೨೨ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಮುಂಬರುವ ಅಧಿವೇಶನದಲ್ಲಿ
ತೀರ್ಮಾನಿಸಬೇಕು. ಮತ್ತು ೧೦ ಹೆಚ್.ಪಿ. ಕೃಷಿ ಪಂಪ್ಸೆಟ್ಗಳಿಗೆ ಗುಣಾತ್ಮಕ ವಿದ್ಯುತ್ ಸರಬರಾಜು ಮಾಡುವ ಬದ್ಧತೆ ಉಳಿಸಿಕೊಳ್ಳಬೇಕು. ಕೃಷಿ ವಿದ್ಯುತ್ ಮೀಟರ್ ಗಳಿಗೆ ಆಧಾರ್ ಜೋಡಣೆ ಮಾಡುವುದನ್ನು ತಡೆಹಿಡಿಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಖರೀದಿ ಕೇಂದ್ರಗಳ ಮುಖಾಂತರ ರಾಗಿ ಮಾರಾಟ ಮಾಡಿದ ರೈತರಿಗೆ ಹಿಂದಿನ ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಪಾವತಿಸಲು ಕ್ರಮಕೈಗೊಳ್ಳಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ತುಂಬಿದ
ರೈತರಿಗೆ ನಷ್ಟ ಪರಿಹಾರದ ಬಾಕಿಯನ್ನು ವಿಮಾ ಕಂಪನಿಗಳು ಉಳಿಸಿಕೊಂಡಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸೇರಿದಂತೆ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಜಿಲ್ಲಾ ಉಪಾಧ್ಯಕ್ಷ ಯು.ಪಿ. ಜೋಸೆಫ್, ಆಮ್ ಆದ್ಮಿ ಪಕ್ಷದ ಮುಖಂಡೆ ನೇತ್ರಾವತಿ, ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ, ಮುಖಂಡರಾದ ಟಿ.ವಿ. ಮಲ್ಲೇಶಪ್ಪ, ಕೆ.ಟಿ. ರಮೇಶ್, ಕಣ್ಣಪ್ಪ, ಕೆ.ಪಿ. ರಮೇಶ್ ಇನ್ನಿತರರು ಭಾಗವಹಿಸಿದ್ದರು.