ತಾಲ್ಲೂಕಿನ ಆನಂದಪುರಂನಿಂದ ಸಾಗರದ ವಿವಿಧ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಆನಂದಪುರಂನಿಂದ ಸಾಗರದ ಇಂದಿರಾಗಾಂಧಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜ್ಯೂನಿಯರ್ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಕಳೆದ ಎರಡಮೂರು ದಿನಗಳಿಂದ ವಿದ್ಯಾರ್ಥಿಗಳು ಬಸ್ ಇಲ್ಲದೆ
ಕಾಲೇಜಿನ ಪಾಠ ಪ್ರವಚನಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ತಕ್ಷಣ ಹೆಚ್ಚುವರಿ ಬಸ್ ಒದಗಿಸಲು ಮನವಿ ಮಾಡಿದರು.
ಶೀಘ್ರ ಕ್ರಮ : ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಡಿಪೋ ಮ್ಯಾನೇಜರ್ ರಾಜಪ್ಪ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಇನ್ನು ಒಂದೆರಡು ದಿನಗಳಲ್ಲಿ ಬಗೆಹರಿಸಲಾಗುತ್ತದೆ. ಹೆಚ್ಚುವರಿ ಬಸ್ ಕಲ್ಪಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿನಿಯರಾದ ಮೇಘನಾ, ಸ್ನೇಹ, ಕವನ, ಲಕ್ಷ್ಮೀ, ಉಮಾ, ಸ್ವರಾಜ್ ಟಿ.ಎಂ., ಗೌತಮ್ ಇದ್ದರು.