ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯನಾಗಲು ನಂತರ ವಿಧಾನ ಸಭಾ ಸದಸ್ಯನಾಗಲು ವಿನೋಬನಗರ ನಿವಾಸಿಗಳ ಸಹಕಾರ ಹಾಗೂ ಶಿವಾಲಯ ಈಶ್ವರನ ಆಶೀರ್ವಾದ ಕಾರಣ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.+
ವಿನೋಬನಗರ ಶಿವಾಲಯದಲ್ಲಿ ಶಿವಾಲಯ ವೀರಶೈವ ಸಮಿತಿಯ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ, ಇಲ್ಲಿನ ಸಮಿತಿಯವರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇವಾಲಯದ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚುವರಿ ಸ್ಥಳವನ್ನು ಕಮಿಟಿ ವತಿಯಿಂದ ಕೋರಿದ್ದರು. ಈ ನಿಟ್ಟಿನಲ್ಲಿ ಸ್ಥಳ ಕೊಡಿಸುವಲ್ಲಿ ಸರ್ಕಾರದ ಜೊತೆ ಪ್ರಯತ್ನ ನಡೆಸವುದಾಗಿ ಹೇಳಿದರು.
ನಮ್ಮ ಹಿಂದೂ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಕಲಿಸಬೇಕು. ಇದು ಪುಣ್ಯ ಸ್ಥಳ. ಅನೇಕ ಜಗದ್ಗುರುಗಳು, ಸಾಧು ಸಂತರು ಬಂದು ಆಶೀರ್ವಾದ ನೀಡಿದಂತಹ ಪುಣ್ಯಕ್ಷೇತ್ರ ಎಂದರು.
ಈ ಸಂದರ್ಭದಲ್ಲಿ ಪಿ.ಹೆಚ್.ಡಿ. ಪಡೆದ ಡಾ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಾಲಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಗಳು, ಪ್ರಧಾನ ಕಾರ್ಯದರ್ಶಿ ಮುರುಗೇಶ್ ಕೂಸ್ನೂರ್, ಸಹ ಕಾರ್ಯದರ್ಶಿ ಮಹೇಶ, ಪ್ರಧಾನ ಅರ್ಚಕ ರುದ್ರಯ್ಯ, ವಿನಯ್ ರಾಜು, ಪುಟ್ಟಯ್ಯ, ನಾಗರಾಜ್, ಚಂದ್ರಯ್ಯ ಮತ್ತಿತರರು ಪಾಲ್ಗೊಂಡಿದ್ದರು.