ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಂಡು ಮಕ್ಕಳು ನಿರಂತರವಾಗಿ ಶಾಲೆಗೆ ಬರುವಂತೆ ಹಾಗೂ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್.ತಿಳಿಸಿದರು.
ಇಂದು ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಾಲಿನಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯಂದಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಈಗಾಗಲೇ ಪಠ್ಯ ಪುಸ್ತಕ ವಿತರಣೆಯಾಗಿದೆ. ಆದರೆ ನೇರವಾಗಿ ಪಠ್ಯ ಕಲಿಸದೇ ಪ್ರಾರಂಭದ 15 ದಿನಗಳ ಕಾಲ ಸೇತುಬಂಧ ಬೋಧನೆ ಮಾಡುವ ಮೂಲಕ ಮಕ್ಕಳನ್ನು ಪಠ್ಯಕ್ಕೆ ತಯಾರು ಮಾಡಬೇಕು. ನಲಿ-ಕಲಿ, ಸೇತುಬಂಧ ಮೌಲ್ಯಶಿಕ್ಷಣ ನೀಡಿದ ನಂತರ ಪಠ್ಯ ಬೋಧನೆ ಮಾಡುವಂತೆ ತಿಳಿಸಿದರು.
ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ಸ್ವಲ್ಪ ಕಡಿಮೆಯಾಗಿದ್ದು ಈಗಿನಿಂದಲೇ 9 ಮತ್ತು 10 ತರಗತಿಗಳ ಬೋಧನೆಗೆ ಹೆಚ್ಚಿನ ಒತ್ತು ನೀಡಿ, ಎಸ್ಎಸ್ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ಬರಲು ಶ್ರಮಿಸಬೇಕೆಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ ಇವರು ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹಿಂದೆ ಇಲ್ಲ. ಶಾಲಾ ಆರಂಭದ ಮೊದಲ ದಿನವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ಸಹಿಯೊಂದಿಗೆ ವಿತರಣೆಯಾಗಿರುವುದು ಹರ್ಷದ ಸಂಗತಿ. ಸರ್ಕಾರಿ ಶಾಲೆಗಳು ಪಠ್ಯ-ಸಮವಸ್ತ್ರ-ಊಟದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಎಲ್ಲರೂ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಹಾಗೂ ಎಲ್ಲ ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗಬೇಕು.
ಶಿಕ್ಷಕರು ಸರಿಯಾದ ಸಮಯಕ್ಕೆ ಮಕ್ಕಳಿಗೆ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳನ್ನು ತಲುಪಿಸಬೇಕೆಂದರು.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗಬೇಕು. ಯಾವ ಮಕ್ಕಳೂ ಕೂಡ ಡ್ರಾಪ್ಔಟ್ ಆಗದಂತೆ ನೋಡಿಕೊಂಡು ಗುಣಾತ್ಮಕ ಶಿಕ್ಷಣದೊಂದಿಗೆ ಎಲ್ಲರನ್ನು ಮುಖ್ಯವಾಹಿನಿಗೆ ತರಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಶೇ.60 ರಷ್ಟು ಹಿರಿಯ ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲೇ ಓದಿದವರು. ಅಂತಹ ಗುಣಮಟ್ಟದ ಶಿಕ್ಷಣ ಅಲ್ಲಿ ದೊರೆಯುತ್ತದೆ. ಮಕ್ಕಳು ನಿರಂತರವಾಗಿ ಶಾಲೆಗೆ ಬಂದಲ್ಲಿ ಯಾವುದೇ ದುಶ್ಚಟಕ್ಕೆ ಬಲಿಯಾಗುವುದು ತಪ್ಪುತ್ತದೆ. ನಗರಗಳಿಗಿಂತ ಹಳ್ಳಿಗಳ ಶಾಲೆಗಳಲ್ಲಿ ಉತ್ತಮ ವಾತಾವರಣ ಇದೆ. ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಜೊತೆಗೆ ಎಸ್ಎಸ್ಎಲ್ಸಿ ಉತ್ತಮ ಫಲಿಂತಾಂಶಕ್ಕೆ ಒತ್ತು ನೀಡಬೇಕೆಂದರು.
ಮೇ.29 ಮತ್ತು 30 ರಂದು ಶಾಲೆಗಳಿಗೆ ಶಿಕ್ಷಕರು ಆಗಮಿಸಿ, ಶಾಲಾ ಪ್ರಾರಂಭೋತ್ಸವದ ಸಿದ್ದತೆ, ಸ್ವಚ್ಚತೆ, ಶಾಲಾ ಶೈಕ್ಷಣಿಕ ಯೋಜನೆ, ಅಭಿವೃದ್ದಿ ಯೋಜನೆ, ಶಾಲಾ ವೇಳಾಪಟ್ಟಿ ತಯಾರಿಕೆ, ಮಕ್ಕಳ ಪಟ್ಟಿ ತಯಾರಿಸಿದ್ದಾರೆ. ದಿ: 01-06-2023 ರಿಂದ 30-06-2023 ರವರೆಗೆ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮ ಮಾಡಲಾಗುವುದು. ಇದರಲ್ಲಿ ಮಕ್ಕಳಿಗೆ ಪ್ರಿಟೆಸ್ಟ್, ಪೋಸ್ಟ್ ಟೆಸ್ಟ್, ನೈಧಾನಿಕ ಪರೀಕ್ಷೆ ಮಾಡಲಾಗುವುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ ಪರಿಹಾರ ಬೋಧನೆ ನಡೆಸಿ ನಂತರ ಸಾಫಲ್ಯ ಪರೀಕ್ಷೆ ನಡೆಸುವುದರೊಂದಿಗೆ ಗುಣಮಟ್ಟ ಮತ್ತು ನಿರಂತರ ಕಲಿಕೆಗೆ ಆದ್ಯತೆ ನೀಡಲಾಗುವುದು.
ಜಿಲ್ಲೆಯಲ್ಲಿ 2307 ಪ್ರಾಥಮಿಕ ಮತ್ತು 511 ಪ್ರೌಢಶಾಲೆಗಳಿದ್ದು, ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ 1031 ಅತಿಥಿ ಶಿಕ್ಷಕರ ನೇಮಕಕ್ಕೆ ಮಂಜೂರಾತಿ ದೊರೆತಿದೆ. ದಿನಾಂಕ : 31-05-2023 ರಿಂದ 03-06-2023 ರವರೆಗೆ ಶಾಲಾ ದಾಖಲಾತಿ ಆಂದೋಲನ ನಡೆಸಲಾಗುವುದು.
-ಸಿ.ಆರ್.ಪರಮೇಶ್ವರಪ್ಪ, ಡಿಡಿಪಿಐ
===========
ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಭದ್ರಾವತಿ ತಹಶೀಲ್ದಾರ್ ಸುರೇಶ್, ಡಯಟ್ ಪ್ರಾಚಾರ್ಯರಾದ ಬಸವರಾಜಪ್ಪ, ಬಿಇಓ ನಾಗೇಂದ್ರಪ್ಪ, ಇತರೆ ಅಧಿಕಾರಿಗಳು ಇದ್ದರು.