ಶಿವಮೊಗ್ಗ: ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಲಾಲಾರಸ ಗ್ರಂಥಿಗಳಲ್ಲಿನ ಕಲ್ಲು ತೆಗೆಯುವ ಸಿಯಾಲೊಎಂಡೋಸ್ಕೋಪಿ ಕನಿಷ್ಠ ಅಭಿಯೋಗದ ಮೂಲಕ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸೆಯ ನೇರ ಪ್ರದರ್ಶನ ಹಾಗೂ ಉಪನ್ಯಾಸ ಯಶಸ್ವಿಯಾಗಿ ನಡೆಯಿತು.
ಶಸ್ತ್ರ ಚಿಕಿತ್ಸೆಯ ನೇರ ಉಪನ್ಯಾಸದಲ್ಲಿ ಪಾಲ್ಗೊಂಡ ಸಿಯಾಲೊಎಂಡೋಸ್ಕೋಪಿ ಮತ್ತು ಆರ್ತ್ರೋ ಸ್ಕೋಪಿ ಪರಿಣಿತಿ ಹೊಂದಿರುವ ಖ್ಯಾತ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ.ಆದಿತ್ಯ ಮೂರ್ತಿ ಮತ್ತು ಅವರ ಸಹೋದ್ಯೋಗಿಗಳಾದ ಡಾ.ಪೃಥ್ವಿಬಾಚಲ್ಲಿ ಮತ್ತು ಡಾ.ಪ್ರಶಾಂತ್ ಭಟ್ ಅವರುಗಳು ಹಂತ ಹಂತವಾಗಿ ವಿವರಣೆ ನೀಡಿದರು.
ಏನಿದು ಶಸ್ತ್ರಚಿಕಿತ್ಸೆ?
60 ವರ್ಷದ ಮಹಿಳೆಯೊಬ್ಬರ ಬಲ ಪೆರೋಡಿಕ್ ಗ್ರಂಥಿಯಲ್ಲಿ ಸುಮಾರು 8 x 7 ಎಂಎಂ ಅಳತೆಯ ಲಾಲಾರಸದ ಕಲ್ಲು(Parotid Duct) ಕಾಣಿಸಿಕೊಂಡಿತ್ತು. ಇದನ್ನು ಕನಿಷ್ಠ ಅಭಿಯೋಗದ ಎಂಡೋಸ್ಕೋಪಿಕಲ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಯಿತು. ಈ ಪ್ರಕ್ರಿಯೆಯನ್ನು ತಜ್ಞರ ತಂಡ ನೇರ ಪ್ರಸಾರದ ಮೂಲಕ ವಿವರಿಸಿದ್ದು ವಿಶೇಷವಾಗಿತ್ತು.
ಡಾ. ಆದಿತ್ಯ ಮೂರ್ತಿ ಅವರು ತಮ್ಮ ಕೇಸ್ ಸರಣಿಯೊಂದಿಗೆ ವಿವಿಧ ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಎಂಡೋಸ್ಕೋಪಿಯ ಅನ್ವಯದ ಬಗ್ಗೆ ವಿವರಿಸಿದರು.
ಈ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಬಳಸುವ ಉಪಕರಣಗಳ ಬಗ್ಗೆ ಡಾ. ಪ್ರಶಾಂತ್ ಭಟ್ ವಿವರಿಸಿದರೆ, ಇತ್ತೀಚಿನ ವರ್ಷಗಳಲ್ಲಿ ಲಾಲಾರಸ ಗ್ರಂಥಿಗಳ ವಿವಿಧ ಪ್ರತಿಬಂಧಕ ರೋಗದ ಅಸ್ವಸ್ಥತೆಗಳು, ಅವುಗಳ ನಿರ್ವಹಣೆಯ ಕುರಿತಾಗಿ ಸಿಯಾಲೋ ಎಂಡೋಸ್ಕೋಪಿಯೊಂದಿಗೆ ಡಾ.ಪೃಥ್ವಿ ಬಾಚಲ್ಲಿ ಅವರು ಚರ್ಚೆಯೊಂದಿಗೆ ವಿವರಿಸಿದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿಗೆ ಸಂಬಂಧಿಸಿದಂತೆ ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿ ವೈದ್ಯರೂ ನಿರಂತರ ಅಧ್ಯಯನಶೀಲರಾಗಿರಬೇಕು ಎಂದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್. ಸುರೇಶ್ ಅವರು ತಾಂತ್ರಿಕ ಪ್ರಗತಿಗೆ ಸಂಬಂಧಿಸಿದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಗೆ ಸಂಬಂಧಿಸಿದ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಅಗತ್ಯತೆಯ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ದಂತ ವೈದ್ಯ ಶಾಸ್ತ್ರ, ಓರಲ್ ಮ್ಯಾಕ್ಸಿಲೋಫೇಶಿಯಲ್ ಶಸ್ತ್ರಚಿಕಿತ್ಸಾ ತಜ್ಞರು, ಇಎನ್’ಟಿ ಶಸ್ತ್ರಚಿಕಿತ್ಸಾ ತಜ್ಞರು, ಶಿವಮೊಗ್ಗ ಸೇರಿದಂತೆ ನೆರೆಯ ಜಿಲ್ಲೆಗಳ ಜನರಲ್ ಸರ್ಜನ್’ಗಳು ಪಾಲ್ಗೊಂಡಿದ್ದರು.
ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಪ್ರಮೋದ್ ಕೃಷ್ಣ ಬಿ. ಸ್ವಾಗತಿಸಿ, ಇದೇ ವಿಭಾಗದ ರೀಡರ್ ಡಾ.ಅಬ್ದುಲ್ ಹಸೀಬ್ ಕ್ವಾದ್ರಿ ಉಪನ್ಯಾಸಕರನ್ನು ಪರಿಚಯಿಸಿದರು. ಓರಲ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ.ಅನುಭವ ಜನ್ನು ವಂದನಾರ್ಪಣೆ ನಡೆಸಿದರು.