ಶಿವಮೊಗ್ಗ: ಹಿಂದೂ ಮಹಾಸಭಾದ ನಾಯಕರೇ ಶಾಸಕರಾದರೆ ಶಾಂತಿ ಹೇಗೆ ಕಾಪಾಡುತ್ತಾರೆ? ಆದರೆ ನಾನು ಮಾತ್ರ ಶಾಂತಿ ಮತ್ತು ಸೌಹಾರ್ದತೆಗೆ ಬದ್ಧನಾಗಿದ್ದೇನೆ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಹೇಳಿದರು.


ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಸೋಲಿನ ಬಗ್ಗೆ ಬೇಸರವಿಲ್ಲ. ಆದರೆ ಮತದಾರರು ಬೆಂಬಲಿಸದಿರುವುದು ಬೇಸರ ತಂದಿದೆ. ನನ್ನ ನಿರೀಕ್ಷೆಯ ವಿರುದ್ಧವಾಗಿ ಫಲಿತಾಂಶ ಬಂದಿದೆ. ಅದನ್ನು ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದರು.


ಶಿವಮೊಗ್ಗ ನಗರದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಲು, ಸರ್ಕಾರಿ ನೌಕರರ ಸಮಸ್ಯೆ ಬಗೆಹರಿಸಲು, ಜಾತಿ ಹಾಗೂ ಧರ್ಮ ಆಶ್ರಯಿಸದೆ ಸ್ಪರ್ಧೆ ಮಾಡಿದ್ದೆ. ಆದರೆ ಮತದಾರರು ನನ್ನ ಚಿಂತನೆಗಳಿಗೆ ಸ್ಪಂದಿಸಿಲ್ಲ. ಧರ್ಮದ ಅಫೀಮು ಇಲ್ಲಿ ಕೆಲಸ ಮಾಡಿದೆ. ಬಿಜೆಪಿಯವರು ಮತಗಟ್ಟೆಗಳಲ್ಲಿ ಬಜರಂಗಿ ಫೋಟೋ ಪ್ರದರ್ಶಿಸಿದರು. ಕೇರಳ ಸ್ಟೋರಿ ಚಿತ್ರವನ್ನು

ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿ ಹಿಂದುಗಳ ಭಾವನೆಗಳನ್ನು ಕೆರಳುವಂತೆ ಮಾಡಿದರು. ಮುಸ್ಲಿಂರಿಂದ ಭೀತಿ ಇದೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಕೂಡ ಜಾತಿ ಮತ್ತು ಒಳಜಾತಿಗೆ ಸೀಮಿತವಾಗಿ ಮತ ಕೇಳಿದರು. ಈ ಎಲ್ಲಾ ಕಾರಣಗಳಿಂದ ನನಗೆ ಸೋಲಾಗಿದೆ. ಆದರೆ ಈ ಸೋಲಿನಿಂದ ನಾನು ವಿಚಲಿತನಾಗುವುದಿಲ್ಲ. ಶಾಂತಿ ಕಾಪಾಡುವ ಪ್ರಯತ್ನದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.


ಕಾಂಗ್ರೆಸ್ ಮತ್ತು ಬಿಜೆಪಿಯವರು ಬಡತನವನ್ನೇ ಖರೀದಿ ಮಾಡಿದ್ದಾರೆ. ಸಾಕಷ್ಟು ಹಣ ಹಂಚಿದ್ದಾರೆ. ಜಾತಿ ಧರ್ಮಗಳನ್ನು ಮಧ್ಯೆ ತಂದಿದ್ದಾರೆ. ನೌಕರರು ಕೂಡ ನನ್ನ ಕೈ ಹಿಡಿಯಲಿಲ್ಲ. ಮನಸ್ಸುಗಳು ಮತ್ತೆ ಮುದುಡುತ್ತವೆ ಎಂಬ ಭೀತಿ ಶಿವಮೊಗ್ಗದ ಜನರಲ್ಲಿದೆ. ಮುಂದೆ ಗಣಪತಿ ಹಬ್ಬ ಬರುತ್ತದೆ. ಗಣಪತಿ ಹಬ್ಬವನ್ನು ಶಾಂತಿಯುತವಾಗಿ ನಡೆಸಬೇಕಾಗಿದೆ. ಆದರೆ ಹಿಂದೂ ಮಹಾಸಭಾದ ನಾಯಕರೇ ಈಗ ಶಾಸಕರಾಗಿದ್ದಾರೆ. ಗಣಪತಿಹಬ್ಬವನ್ನು ಶಾಂತಿಯಿಂದ ಆಚರಿಸಲು ಹೇಗೆ ಸಾಧ್ಯ ಎಂಬುದನ್ನು ಕಾದುನೋಡಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ದೀಪಕ್ ಸಿಂಗ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!