ಶಿವಮೊಗ್ಗ, ಏ.೨೨:
ಶಿವಮೊಗ್ಗ ನಗರದ ಶಾಂತಿ ಸುವ್ಯವಸ್ಥೆಗೆ ಆದ್ಯತೆ ನೀಡುವ ಅಭ್ಯರ್ಥಿ ನಗರದ ಶಾಸಕರಾಗಬೇಕು. ನಗರದ ಹಿತ ಕಾಪಾಡುವ ಅಭ್ಯರ್ಥಿ ಜಾತ್ಯಾತೀತ ಜನತಾದಳದಲ್ಲಿ ಇದ್ದಾರೆ. ಇನ್ನೂ ಸ್ಪರ್ಧಿಸಿರುವ ಇಬ್ಬರಲ್ಲಿ ಒಬ್ಬರು ಶಾಂತಿಗೆ ಬೆಂಕಿ ಹಚ್ಚುವವರು ಮತ್ತೊಬ್ಬರು ಬೆಂಕಿ ಉರಿಯುವಾಗ ಸಿಹಿ ಹಂಚಿ ಸಂಭ್ರಮಿಸುವವರು ಎಂದು ಪರೋಕ್ಷವಾಗಿ ಪ್ರತಿಸ್ಪರ್ಧಿಗಳ ವಿರುದ್ಧ ಮಾಜಿ ಶಾಸಕ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕೆ.ಬಿ.ಪ್ರಸನ್ನಕುಮಾರ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಜೆಡಿಎಸ್ ಕಛೇರಿಯ ಗಾಂಧಿಮಂದಿರಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರಸಕ್ತ ಚುನಾವಣೆಯಲ್ಲಿ ಶಿವಮೊಗ್ಗ ನಗರದ ಶಾಂತಿ ಜೊತೆಗ ಅಭಿವೃದ್ಧಿ ಮುಖ್ಯವಾಗಿಟ್ಟುಕೊಳ್ಳುವ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಗಲ್ಲಿ ಗಲ್ಲಿ ತಿರುಗಿ ಬೂತ್ ಮಟ್ಟದಲ್ಲಿ ಓಡಾಡಿ, ಮನೆ ಮನೆಗೆ ಹೋಗಿ ಮತ ಕೇಳುವ ಮೂಲಕ ಗೆಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಆ ಎರಡು ಪಕ್ಷದ ಅಭ್ಯರ್ಥಿಗಳು ಸರಿ ಇಲ್ಲವೆಂಬುದು ಜನರಿಗೆ ಗೊತ್ತಿದೆ. ಪದೇ ಪದೇ ಸೆಕ್ಷನ್, ಕರ್ಫ್ಯೂ ಹೆಸರಿನಲ್ಲಿ ಬಡವರ ಬದುಕಿಗೆ ಕೊಳ್ಳಿ ಇಡುವ ಮಹೋಭಾವವನ್ನು ಆ ಅಭ್ಯರ್ಥಿಗಳು ಹೊಂದಿದ್ದಾರೆ. ಅಂತಹವರಿಂದಲೇ ಶಿವಮೊಗ್ಗ ಕೈಗಾರಿಕಾ ಪ್ರದೇಶವಾಗಿ ಬೆಳೆಯಲೇ ಇಲ್ಲ. ಜನರಿಗೆ ಅವರ ಆಟ ಗೊತ್ತಾಗಿದೆ. ನಮ್ಮ ನಡುವಿನ ನೆಮ್ಮದಿ ಹಾಗೂ ಪ್ರೀತಿ ವಿಶ್ವಾಸದ ಮನಸ್ಸುಗಳಿಗೆ ಬೆಂಕಿ ಹಚ್ಚಿ ಶಾಂತಿ ಕದಡುವ ಪ್ರಯತ್ನಗಳು ನಿಲ್ಲಬೇಕು ಎಂದರು.
ನಾನು ಯಾವುದೇ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳನ್ನು ಜೆಡಿಎಸ್‌ಗೆ ಬನ್ನಿ ಎಂದು ಒತ್ತಾಯಿಸುವುದಿಲ್ಲ. ಆದರೆ ಇದೇ ಅಭಿಮಾನಿಗಳು, ಪದಾಧಿಕಾರಿಗಳಿಗೆ ಮರೆಯದೇ ಮತವನ್ನು ಜೆಡಿಎಸ್‌ಗೆ ಹಾಕಿ ಎಂದು ವಿನಂತಿಸುತ್ತಿದ್ದೇನೆ. ಚುನಾವಣೆಯ ಬಗ್ಗೆ ಅಪಾರ ಅನುಭವ ಹೊಂದಿರುವ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ರಾಜ್ಯ ಹಾಗೂ ದೇಶದ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿರುವ ಆಯನೂರು ಮಂಜುನಾಥ್ ಅವರ ಶಕ್ತಿ ಇದೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಆಶೀರ್ವಾದವಿದೆ. ಶಿವಮೊಗ್ಗದಲ್ಲಿ ಹೊಸ ಇತಿಹಾಸ ಬರೆಯುತ್ತಿವೆ ಎಂದರು.
ಆಯನೂರು ಮಂಜುನಾಥ್ ಮಾತನಾಡಿ, ಗೆಲ್ಲುವ ದಾರಿ ಹಗುರವಾಗಿದೆ. ನನ್ನ ಗೆಲುವಿನ ಹಾದಿಗೆ ಕೆ.ಬಿ. ಪ್ರಸನ್ನಕುಮಾರ್, ಎಂ. ಶ್ರೀಕಾಂತ್ ಅವರ ತಂಡ ಸುಲಭದ ದಾರಿ ಮಾಡಿಕೊಟ್ಟಿದೆ. ಕುರುಕ್ಷೇತ್ರ ಯುದ್ಧ ಸಮರ್ಥವಾಗಿ ಎದುರಿಸುತ್ತೇವೆ. ಹೇಳುವುದಕ್ಕಿಂತ ಮಾಡುವುದು ಲೇಸು ಎಂಬಂತೆ ಕೆಲಸ ಮಾಡುತ್ತೇವೆ. ನಾಳೆಯಿಂದ ಜೆಡಿಎಸ್ ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಎಂದರು.
ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬರುತ್ತಾರೆ. ಆರೋಗ್ಯ ನೋಡಿಕೊಂಡು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬರುವವರಿದ್ದಾರೆ. ಪ್ರಚಾರದ ಕಾವು ಏರುತ್ತಿದೆ. ನನ್ನನ್ನೂ ಸೇರಿಕೊಂಡಂತೆ ನನ್ನ ಜೊತೆಗಿರುವವರು ಚುನಾವಣೆಯ ನಾಡಿ ಮಿಡಿತ ಬಲ್ಲವರಾಗಿದ್ದಾರೆ. ಆದ್ದರಿಂದ ಯಾರ ಭಯವೂ ನಮಗಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ. ಶಿವಮೊಗ್ಗಕ್ಕೆ ಶಾಂತಿ ತರುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ನಾಗರಾಜ ಕಂಕಾರಿ, ಪಾಲಾಕ್ಷಿ, ಸತ್ಯನಾರಾಯಣ್, ರಾಮಕೃಷ್ಣ, ಬೊಮ್ಮನಕಟ್ಟೆ ಮಂಜುನಾಥ್, ಕಡಿದಾಳ್ ಗೋಪಾಲ್, ಸಿದ್ದಪ್ಪ, ರಘು, ಸಂಗಯ್ಯ, ಭಾಸ್ಕರ್ ಇದ್ದರು.