ಯಾವುದೇ ಕಾರಣಕ್ಕೂ ಸಾಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಹರತಾಳು ಹಾಲಪ್ಪ ಅವರಿಗೆ ಬಿಜೆಪಿ ಟಿಕೇಟ್ ಕೊಡಬಾರದು. ಒಂದೊಮ್ಮೆ ನಿಷ್ಟಾವಂತ ಬಿಜೆಪಿ ಕಾರ್ಯಕರ್ತರ ಮಾತು ಮೀರಿ ಹಾಲಪ್ಪ ಹರತಾಳುಗೆ ಟಿಕೇಟ್ ನೀಡಿದರೆ ಅವರನ್ನು ಸೋಲಿಸಲು ಪ್ರಯತ್ನ ನಡೆಸುತ್ತೇವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ.ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.


ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹರತಾಳು ಹಾಲಪ್ಪ ಅವರಿಗೆ ಟಿಕೇಟ್ ಕೊಡಬಾರದು ಎಂದು ಬಿಜೆಪಿ ಜಿಲ್ಲಾ ಮತ್ತು ರಾಜ್ಯ ವರಿಷ್ಟರಿಗೆ ಮನವಿ ಮಾಡಲಾಗಿದ್ದು, ಹಾಲಪ್ಪ ಹೊರತುಪಡಿಸಿ ಪಕ್ಷ ಬೇರೆ ಯಾರಿಗೆ ಟಿಕೇಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು.


ಕಳೆದ ಮುವತ್ತೈದು ವರ್ಷಗಳಿಂದ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷವನ್ನು ಕಟ್ಟಿದ ಮೂಲ ಕಾರ್ಯಕರ್ತರನ್ನು ಶಾಸಕ ಹಾಲಪ್ಪ ಮತ್ತವರ ಟೀಂ ಮೂಲೆಗುಂಪು ಮಾಡಿದೆ. ಪಕ್ಷದಲ್ಲಿ ಕೆಲಸ ಮಾಡದವರಿಗೆ ಬೇರೆಬೇರೆ ಸ್ಥಾನಮಾನ ನೀಡಿದ್ದಾರೆ. ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಸಾವಿರಾರು ಜನರು ಶಾಸಕ ಹಾಲಪ್ಪ ಅವರ ದುವರ್ತನೆ, ಗೂಂಡಾಗಿರಿ, ಅಹಂಕಾರದಿಂದ ಬೇಸತ್ತು ಹೋಗಿದ್ದಾರೆ. ಕ್ಷೇತ್ರವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸಗಳಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆಯೆ ವಿನಃ, ವಸ್ತುಸ್ಥಿತಿ ಬೇರೆ ಇದ್ದು, ಅರೆಬರೆ ಕೆಲಸ ಮಾಡಿ ಅಭಿವೃದ್ದಿಯಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ವೈಜ್ಞಾನಿಕವಾಗಿ ಚಿಂತನೆ ನಡೆಸದೆ ಕೈಗೆತ್ತಿಕೊಂಡ ಸೊರಬ ರಸ್ತೆ ಅಗಲೀಕರಣ ನೆನಗುದಿಗೆ ಬಿದ್ದಿದ್ದು ನಿವಾಸಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ ಎಂದರು.


ಎಲ್.ಬಿ.ಕಾಲೇಜಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಹಾಲಪ್ಪ ಹರತಾಳು, ಅಲ್ಲಿನ ಆಡಳಿತ ಮಂಡಳಿಗೆ ತಮ್ಮ ಆಪ್ತ ವಿನಾಯಕ ರಾವ್ ಅವರನ್ನು ಸದಸ್ಯರನ್ನಾಗಿ ಮಾಡಿದ್ದು ಏಕೆ. ಎಂಎಸ್‌ಐಎಲ್‌ನಲ್ಲಿ ವಿನಾಯಕ ರಾವ್ ಅವರನ್ನು ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಂಡು ೪೦ ರಿಂದ ೫೦ಸಾವಿರ ರೂ. ವೇತನ ಪಾವತಿ ಮಾಡುತ್ತಿರುವುದು ಪಕ್ಷದ ನಿಷ್ಟರನ್ನು ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಬಾವುಟ ಹಿಡಿದು ಇವರನ್ನು ಗೆಲ್ಲಿಸಿದವರನ್ನು ಬಿಟ್ಟು ತಮ್ಮ ಆಪ್ತರಿಗೆ ಮಾತ್ರ ಶಾಸಕರು ಮನ್ನಣೆ ನೀಡುತ್ತಿದ್ದಾರೆ. ಶಾಸಕರ ಇಂತಹ ಹಲವು ತಪ್ಪುಗಳಿಂದ ರೋಸಿ ಹೋಗಿ ನಾವು ಕಠಿಣ ನಿರ್ಧಾರ ಕೈಗೊಂಡಿದ್ದು, ಪಕ್ಷದ ವರಿಷ್ಟರು ಹಾಲಪ್ಪ ಅವರಿಗೆ ಯಾವುದೇ ಕಾರಣಕ್ಕೂ ಟಿಕೇಟ್ ನೀಡಬಾರದು ಎಂದು ಹೇಳಿದರು.


ಬಿಜೆಪಿ ಹಿರಿಯ ಮುಖಂಡ ಜಗದೀಶ್ ಒಡೆಯರ್ ಮಾತನಾಡಿ, ಪ್ರಾಮಾಣಿಕ ಹಿರಿಯ ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿರುವ ಶಾಸಕ ಹಾಲಪ್ಪ ಅವರ ಧೋರಣೆ ಖಂಡನೀಯ. ಬಿಜೆಪಿ ಅಧಿಕಾರಕ್ಕೆ ಬಂದಾಗ ನಾವೆಲ್ಲಾ ಸಂತೋಷ ಪಟ್ಟಿದ್ದೇವು. ಆದರೆ ಶಾಸಕ ಹಾಲಪ್ಪ ಹರತಾಳು ಇಂತಹ ದುರಂಹಕಾರಿಯಾಗುತ್ತಾರೆ ಎಂದು ಭಾವಿಸಿರಲಿಲ್ಲ. ಈಗಾಗಲೆ ಹಾಲಪ್ಪ ವರ್ತನೆಯನ್ನು ಪಕ್ಷದ ವರಿಷ್ಟರ ಗಮನಕ್ಕೆ ತಂದು ಪರ್ಯಾಯ ಅಭ್ಯರ್ಥಿಗೆ ಟಿಕೇಟ್ ಕೊಡಲು ಮನವಿ ಮಾಡಲಾಗಿದೆ ಎಂದು ಹೇಳಿದರು.


ಪ್ರಮುಖರಾದ ಪ್ರಕಾಶ್ ಕುಂಠೆ, ಕಸ್ತೂರಿ ಸಾಗರ್ ಮಾತನಾಡಿದರು. ಗೋಷ್ಟಿಯಲ್ಲಿ ಶಿವು ತ್ಯಾಗರ್ತಿ, ಗಿರೀಶ್, ನಾಗರಾಜ್ ಮೊಗವೀರ ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!