ಶಿವಮೊಗ್ಗ : ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಐ ಎನ್ ಟಿ ಯು ಸಿ ವಿದ್ಯಾರ್ಥಿ ಘಟಕದ ವತಿಯಿಂದ ಇಂದು ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲದೇ, ಅಧಿಕಾರಿಗಳು ಮತ್ತು ನೌಕರರು ಸರಕಾರದ ಆದೇಶ ನೀತಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಾಲನಾ ಪರವಾನಗಿ, ಆರ್.ಸಿ, ಸ್ಮಾಟ್ ಕಾರ್ಡ್, ಅಂಚೆ ಮುಖಾಂತರ ರವಾನೆ ಮಾಡಬೇಕೆಂದು ಆದೇಶವಿದ್ದರೂ ಕೆಲವು ಅಧಿಕಾರಿಗಳು ಇದನ್ನು ಪಾಲನೆ ಮಾಡುತ್ತಿಲ್ಲ. ಕಚೇರಿಯಲ್ಲಿ ಸಕಾಲ ಯೋಜನೆಯೂ ಕೂಡ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ.  ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯ ನೂರು ಮೀಟರ್‌ ದೂರದಲ್ಲಿರುವ ಆರ್‌ಟಿಒ ಕಚೇರಿ ಆವರಣ ಪ್ರವೇಶಿಸುತ್ತಿದ್ದಂತೆ ಮಧ್ಯವರ್ತಿಗಳು ನೊಣಗಳಂತೆ ಮುತ್ತಿಕೊಳ್ಳುತ್ತಾರೆ. ಕಚೇರಿಯೊಳಗೆ ಪ್ರವೇಶಿಸಲೂ ಬಿಡದ ಏಜೆಂಟರು, ವಿದ್ಯಾರ್ಥಿಗಳು, ಅಮಾಯಕರು ಹಾಗೂ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಸುಳ್ಳು ಹೇಳಿ ಅವರ ಹಾದಿ ತಪ್ಪಿಸುತ್ತಾರೆ. ‘ಒಳಗೆ ತೆರಳಿದರೆ ಕಚೇರಿಯಿಂದ ಕಚೇರಿಗೆ ಸುತ್ತಬೇಕು. ಇಲ್ಲಿ ನಾವೇ ಎಲ್ಲವನ್ನೂ ಮಾಡಿಕೊಡುತ್ತೇವೆ’ ಎಂದು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಕೆಲ ಮಧ್ಯವರ್ತಿಗಳು, ತಾವೇ ಆರ್‌ಟಿಒ ಕಚೇರಿ ಸಿಬ್ಬಂದಿ ಎಂದು ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಜನರು ಏಕಾಂಗಿಯಾಗಿ ಆರ್‌ಟಿಒ ಕಚೇರಿಗೆ ತೆರಳಿ ಸೇವೆ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಸಾರ್ವಜನಿಕರೇ ನೇರವಾಗಿ ಹೋದರೆ ಡಿಎಲ್, ಆರ್.ಸಿ ಕಾರ್ಡ್ ಹಾಗೂ ಇನ್ನಿತರೆ ಸೌಲಭ್ಯ ಕೈಗೆಟುಕುವುದು ಮೂರ್ನಾಲ್ಕು ತಿಂಗಳು ಆಗುತ್ತಿದೆ. ಆದರೆ ಮಧ್ಯವರ್ತಿಗಳಿಗೆ ಒಂದು ತಿಂಗಳವೊಳಗಾಗಿ ಆರ್‌ಸಿ, ಡಿಎಲ್ ಕಾರ್ಡ್ ಕೈ ಸೇರುತ್ತಿದೆ. ಒಬ್ಬ ಮುಖ್ಯ ಮಧ್ಯವರ್ತಿ ಏಳೆಂಟು ಜನ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದು, ಅವರು ಕಚೇರಿಗೆ ಬಂದ ಜನರನ್ನು ಸೆಳೆಯುತ್ತಾರೆ. ಮುಖ್ಯಸ್ಥ ಸಮೀಪದಲ್ಲೇ ಇರುವ ಕಚೇರಿಯಲ್ಲಿ ಫೈಲ್‌ಗಳೊಂದಿಗೆ ಮುಳುಗಿರುತ್ತಾರೆ.

ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಕ್ರಮ ಎಲ್ಲಾ ಹಂತದ ಸಿಬ್ಬಂದಿಗೆ ಗೊತ್ತಿದೆ. 

ಆದರೆ, ಪುಡಿ ಗಾಸಿನ ಆಸೆಗೆ ಬಿದ್ದಿರುವ ಸಿಬ್ಬಂದಿ ಪರೋಕ್ಷವಾಗಿ ಮಧ್ಯವರ್ತಿಗಳ ಹಾವಳಿಗೆ ಕುಮ್ಮಕ್ಕು ನೀಡಿದ್ದಾರೆ. ಅವರ ನೇತೃತ್ವದಲ್ಲೇ ಅಕ್ರಮ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಚೇರಿ ಆವರಣದಲ್ಲಿ ಜನರಿಗಿಂತಲೂ ಏಜೆಂಟರೇ ಇರುತ್ತಾರೆ ಎಂದು ಆರೋಪಿಸಿದರು.

ನೆಪಕ್ಕೆ ಆನ್‌ಲೈನ್‌ ಪ್ರಕ್ರಿಯೆ: ಕಳೆದ ವರ್ಷ ಮೋಟರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಆರ್‌ಟಿಒ ಕಚೇರಿಯ 25ಕ್ಕೂ ಹೆಚ್ಚು ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಯಿತು. ಅದಕ್ಕಾಗಿ ‘ಸಾರಥಿ’ ವೆಬ್‌ತಾಣ ರೂಪಿಸಲಾಯಿತು. ಪ್ರತಿ ಸೇವೆಗೂ ‘ಸಕಾಲ’ ನಿಗದಿ ಮಾಡಲಾಗಿದ್ದರೂ ಆರ್‌ಟಿಒ ಕಚೇರಿ ಆವರಣದಲ್ಲಿರುವ ಮಧ್ಯವರ್ತಿಗಳನ್ನು ನೇರವಾಗಿ ಸೇವೆ ಪಡೆಯಲು ಬಿಡುತ್ತಿಲ್ಲ ಎಂದು ದೂರಿದರು.

ಈ ಹಿಂದೆ ಕಾಲೇಜುಗಳಿಗೆ ತೆರಳಿ ಕ್ಯಾಂಪ್ ನಡೆಸಿ ವಿದ್ಯಾರ್ಥಿಗಳಿಗೆ ಪರವಾಗಿ ನೀಡಲಾಗುತ್ತಿತ್ತು. ಈಗ ಅದನ್ನು ಸ್ಥಗಿತಗೊಳ್ಳಲಾಗಿದೆ. ಈ ಸೇವೆಯನ್ನು ಪುನರ್ ಆರಂಭಿಸಬೇಕು. ಆರ್‌ಟಿಒ ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗಿರೀಶ್, ಬಾಲಾಜಿ ಮತ್ತಿತರರು ಪಾಲ್ಗೊಂಡಿದ್ದರು

By admin

ನಿಮ್ಮದೊಂದು ಉತ್ತರ

You missed

error: Content is protected !!