ದಾವಣಗೆರೆ: ಜಿಲ್ಲೆಯ ಆಹಾರ ಇಲಾಖೆಯ ಶಿರಸ್ತೆದಾರ ಅಜ್ಜಪ್ಪ ಅವರ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತಂದೆಯ ಜೀವ ಉಳಿಸಲು ಪುತ್ರಿಯೊಬ್ಬಳು ಲಿವರ್ ದಾನ ಮಾಡಿದರೂ, ಚಿಕಿತ್ಸಾ ವೆಚ್ಚ ಹೆಚ್ಚಾಗಿ ಕುಟುಂಬ ಆತಂಕದಲ್ಲಿದೆ. ಅಜ್ಜಪ್ಪ ಅವರು ಅಂಗಾಂಗ ವೈಫಲ್ಯದಿಂದ ಗಂಭೀರವಾಗಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ, ಅವರ ಪುತ್ರಿ ಚಂದನಾ ತಮ್ಮ ಲಿವರ್ನ ಒಂದು ಭಾಗವನ್ನು ದಾನ ಮಾಡಿದ್ದರು.

ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಚಂದನಾ ತಂದೆಯ ಜೀವ ಉಳಿಸಲು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಕಳೆದ ತಿಂಗಳು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಅಜ್ಜಪ್ಪರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಆರಂಭದಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು. ಆದರೆ ಚಿಕಿತ್ಸೆ ಹಾಗೂ ಇತರೆ ವೆಚ್ಚಗಳನ್ನು ಸೇರಿಸಿ ಆಸ್ಪತ್ರೆಯ ಬಿಲ್ ಸುಮಾರು 57 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಆರೋಗ್ಯ ಸಂಜೀವಿನಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಒಂದು ಲಕ್ಷ ರೂಪಾಯಿ ವೈಯಕ್ತಿಕ ಸಹಾಯ ನೀಡಿದ್ದಾರೆ. ಸಾರ್ವಜನಿಕರು ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.