
ಕಾಲ್ಪನಿಕ ಚಿತ್ರ
ಭದ್ರಾವತಿ, ಮಾ.03:
ಸಖತ್ Style ಮಾಡಲು ಹೋಗಿ ನಿಮ್ಮ ನಿಮ್ಮ ವೇಷ ಭೂಷಣ ಅವಾಂತರಗಳನ್ನು ನಾನಾ ಬಗೆಯಲ್ಲಿ ತೋರಿಸಲು ಹೋಗುವ ಯುವಕರೇ, ಅದೇ ಗುಂಪಿನಲ್ಲಿ ನೀವು ನಿಮ್ಮ ವಾಹನವನ್ನು ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳಬೇಡಿ. ಹೀಗೆ ಮಾಡಿದರೆ ನೀವು ಕಾನೂನು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಇಂತಹದೊಂದು ಘಟನೆ ಹಾಗೂ ಈ ಪೀಠಿಕೆ ಕಾರಣ ವೇನೆಂದರೆ ಜಿಲ್ಲೆಯ ಭದ್ರಾವತಿ ನ್ಯೂಟೌನ್ ಪೊಲೀಸರು ಇಂತಹ ಬೈಕನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದು, ಭದ್ರಾವತಿ ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿ ತೀರ್ಪು ನೀಡಿದೆ.

ಘಟನೆಯ ಸಮಗ್ರ ವಿವರ
ದಿನಾಂಕ-23-02-2023 ರಂದು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಜಯಶ್ರೀ ಸರ್ಕಲ್ ಬಳಿ ಕೆಎ-02-ಎಚ್ಎಸ್ -1302 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ ಸವಾರ ಗಗನ್ ಎಂಬ ವ್ಯಕ್ತಿಯು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದು ಮತ್ತು ಬೈಕ್ ನ ಆರ್.ಸಿ ಯಲ್ಲಿ ನಮೂದಿಸಿದ ಬಣ್ಣವನ್ನು ಬದಲಾಯಿಸಿ ಕಪ್ಪು ಬಣ್ಣವನ್ನು ಮಾಡಿಸಿದ್ದು ಹಾಗೂ ಬೈಕ್ ನ ಸೈಲೆನ್ಸರ್ ಅನ್ನು ಕೂಡ ಪರಿವರ್ತಿಸಿ ಹೆಚ್ಚು ಶಬ್ದ ಬರುವಂತೆ ಮಾರ್ಪಡಿಸಿದ ಸೈಲೆನ್ಸರ್ ಅನ್ನು ಅಳವಡಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ರಂಗನಾಥ್, ಪಿಎಸ್ಐ ನ್ಯೂ ಟೌನ್ ಪೊಲೀಸ್ ಠಾಣೆ ರವರು ಆರೋಪಿತನ ವಿರುದ್ಧ ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ದಿನಾಂಕ: 28-02-2023 ರಂದು ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯ ಭದ್ರಾವತಿಯ ಮಾನ್ಯ ನ್ಯಾಯಧೀಶರಾದ ಯತೀಶ್ ರವರು ಆರೋಪಿತನಾದ ಗಗನ್, 25 ವರ್ಷ, ಹೊಸಮನೆ, ಭದ್ರಾವತಿ ಟೌನ್ ಈತನಿಗೆ ರೂ 6,500/- ದಂಡ ವಿಧಿಸಿರುತ್ತಾರೆ.
