ಶಿವಮೊಗ್ಗ: ವಿಮೆಡೋ ಸಂಸ್ಥೆಯಿಂದ ಶಿವಮೊಗ್ಗದಲ್ಲಿ ಆಂಬುಲೆನ್ಸ್ ಸೇವೆ ಆರಂಭಗೊಂಡಿದೆ ಎಂದು ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಎಂ.ಕೆ.ದರ್ಶನ್ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರಿನಲ್ಲಿ ಈವರೆಗೂ ಸಾವಿರಾರು ಜನರಿಗೆ ತುರ್ತು ಸಮಯದಲ್ಲಿ ಆಂಬುಲೆನ್ಸ್ ಒದಗಿಸುವ ಕೆಲಸ ಮಾಡಿದ್ದೇವೆ. ಇದೀಗ ಶಿವಮೊಗ್ಗದಲ್ಲಿಯೂ ಆಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಗ್ಯ ಸಮಸ್ಯೆ ಎದುರಿಸುವ ಜನರಿಗೆ ಆಂಬುಲೆನ್ಸ್ ಅತ್ಯಂತ ತ್ವರಿತಗತಿಯಲ್ಲಿ ಒದಗಿಸುವುದು ಅತ್ಯಂತ ಅವಶ್ಯಕ. ನಮ್ಮ ಸಂಸ್ಥೆಯು ಅತ್ಯಂತ ವ್ಯವಸ್ಥಿತ ಆಂಬುಲೆನ್ಸ್ ನೆಟ್‌ವರ್ಕ್ ಹೊಂದಿದ್ದು, ಜಿಲ್ಲೆಯಲ್ಲಿ ೫೦ಕ್ಕೂ ಅಧಿಕ ಆಂಬುಲೆನ್ಸ್‌ಗಳ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ. ಆಂಬುಲೆನ್ಸ್ ಅವಶ್ಯಕತೆ ಇರುವ ಜನರು ಕರೆ ಮಾಡಿದ ಕೂಡಲೇ ಸಮೀಪದಲ್ಲೇ ಇರುವ ಆಂಬುಲೆನ್ಸ್ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಆಂಬುಲೆನ್ಸ್ ಸೇವೆ ಸಿಗುವಂತೆ ನೆಟ್‌ವರ್ಕ್ ರೂಪಿಸಲಾಗಿದೆ. ಜಿಲ್ಲೆಯ ಜನರು ತುರ್ತಾಗಿ ಆಂಬುಲೆನ್ಸ್ ಅವಶ್ಯವಿದ್ದಲ್ಲಿ ಸಂಸ್ಥೆಯ ಸಹಾಯವಾಣಿ ಸಂಖ್ಯೆ 9343180000 ಕರೆ ಮಾಡಬಹುದು. ಕೂಡಲೇ ನಮ್ಮ ನೆಟ್‌ವರ್ಕ್‌ನಲ್ಲಿರುವ ಸಮೀಪದ ಆಂಬುಲೆನ್ಸ್ ಸೇವೆಯನ್ನು ಅವರಿಗೆ ಒದಗಿಸಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಸೋಂಕು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿಂದಲೂ ಎಲ್ಲರಿಗೂ ಆಂಬುಲೆನ್ಸ್ ಅವಶ್ಯಕ ಆಗಿದೆ. 50ಕ್ಕೂ ಅಧಿಕ ಆಂಬುಲೆನ್ಸ್‌ಗಳಲ್ಲಿ 15ಕ್ಕೂ ಹೆಚ್ಚು ಆಂಬುಲೆನ್ಸ್ ವೆಂಟಿಲೇಟರ್ ಸೇವೆಯನ್ನು ಸಹ ಒಳಗೊಂಡಿದೆ. ಸಾರ್ವಜನಿಕರಿಗೆ ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸೇವೆ ನೀಡಬೇಕೆಂಬ ಆಶಯವನ್ನು ಹೊಂದಿದ್ದೇವೆ. ಈ ಸೇವೆಯಿಂದ ನೂರಾರು ಜನರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.
ವಿಮೆಡೋ ಸಂಸ್ಥೆಯು ಆರೋಗ್ಯ ಕ್ಷೇತ್ರದ ಜತೆಯಲ್ಲಿ ಇತರೆ ಆರೋಗ್ಯ ಉಪಕರಣಗಳ ಮಾರಾಟದಲ್ಲಿಯೂ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ವೀಲ್‌ಚೇರ್ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯೋಗಿ ವಸ್ತುಗಳನ್ನು ಸಿದ್ಧಪಡಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸಂಸ್ಥೆಯ ಸೇವೆಯ ಸಹಭಾಗೀತ್ವ ಹೊಂದಿರುವ ಗಾಮಾ ಎಂಟರ್‌ಪ್ರೈಸ್‌ನ ಮಹೇಶ್ವರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!