ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರದ ವಿರುದ್ಧ ನಗರದಲ್ಲಿ ಹೋರಾಟ ತೀವ್ರಗೊಂಡಿದ್ದು, ಇದರ ಪ್ರತಿಭಟನೆಯ ಬಿಸಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ತಟ್ಟಿದೆ.
ಬಸವೇಶ್ವರ ಸಭಾಭವನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಾಕಾರಿಣಿಯಲ್ಲಿ ಭಾಗವಹಿಸುತ್ತಿದ್ದ ವೇಳೆ ಅಂಬೇಡ್ಕರ್ ವೃತ್ತದಲ್ಲಿ ಕಾರಿಗೆ ಅಡ್ಡ ಹಾಕಿದ ಪ್ರತಿಭಟನಾಕಾರರು ಸಂಸದರು ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಬೇಕೆ ಬೇಕು ನ್ಯಾಯಬೇಕು ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಕಾರ್ಖಾನೆ ವಿಚಾರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ನೀಡಿದ್ದ ಭರವಸೆ ಸುಳ್ಳಾಗಿದೆ. ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ಕ್ರಮದಿಂದ ನಮ್ಮೂರಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ ಇನ್ನೆರಡು ದಿನದಲ್ಲಿ ಇಡಿ ಅವರೊಂದಿಗೆ ಮಾತನಾಡುತ್ತೇನೆ ಕಾರ್ಖಾನೆಯನ್ನು ಮುಚ್ಚದೆ ಮುಂದುವರೆಸುವ ಸಾಧ್ಯತೆಗಳ ಕುರಿತಾಗಿ ಚರ್ಚೆ ಮಾಡಿ ತಿಳಿಸುತ್ತೇನೆ ಎಂದರು.
ಆದರೆ ಪ್ರತಿಭಟನಾಕಾರರು ಸಂಸದರ ಮಾತಿಗೆ ಸೊಪ್ಪು ಹಾಕದೆ ಧರಣಿ ಮುಂದುವರೆಸಿದರು. ಸಂಸದರು ಭೇಟಿ ನೀಡುವ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೂ ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು.