ಶಿವಮೊಗ್ಗ : ರೈಸ್ ದಿ ಬಾರ್ ಪುಸ್ತಕ ಒಂದು ಕಿರು ಭಗವದ್ಗೀತೆ ಇದ್ದಂತೆ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಬಣ್ಣಿಸಿದ್ದಾರೆ. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ, ಶಿವಮೊಗ್ಗದ ವೈದ್ಯ ಡಾ. ರಾಹುಲ್ ದೇವರಾಜ್ ರಚಿಸಿರುವ ‘ರೈಸ್ ದಿ ಬಾರ್’ ಪುಸ್ತಕ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

ರೈಸ್ ದಿ ಬಾರ್ ಒಂದು ಸ್ಫೂರ್ತಿದಾಯಕ ಸೆಲ್ಫ್ ಹೆಲ್ಪ್ ಪುಸ್ತಕವಾಗಿದ್ದು, ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲಾಗಿದೆ. ಹೆಸರೇ ಸೂಚಿಸುವಂತೆ ಜೀವನ ಮೌಲ್ಯಗಳನ್ನು ಹೆಚ್ಚಿಸುವ ಪುಸ್ತಕವಾಗಿದೆ. ಇದಕ್ಕೆ ಕಿರು ಭಗವದ್ಗೀತೆ ಕೃತಿ ಎಂದರೂ ತಪ್ಪಿಲ್ಲ. ಇದೊಂದು ಶ್ರೇಷ್ಠ ಪುಸ್ತಕವಾಗಿ ಹೊರಹೊಮ್ಮಿದೆ. ಯುವ ಪೀಳಿಗೆ ಮೊಬೈಲ್, ರಿಮೋಟ್ ಬಟನ್ ಗಳನ್ನು ಒತ್ತುವ ಬದಲು ಇಂತಹ ಕೃತಿಗಳನ್ನು ಅಭ್ಯಸಿಸಿದರೆ, ತಾವು ಕೂಢ ಸಾಧಿಸಲು ಸಹಕಾರಿಯಾಗುತ್ತದೆ ಎಂದರು. ಅಲ್ಲದೇ ಕೃತಿ ರಚನೆಕಾರರಾದ ಡಾ. ರಾಹುಲ್ ಇನ್ನೂ ಯುವಕರಾಗಿದ್ದು, ಆದರೂ ಪ್ರಬುದ್ಧವಾಗಿ ಬೆಳೆದು ಈ ಕೃತಿ ರಚಿಸಿರುವುದು ಇಂದಿನ ಯುವಕರಿಗೆ ದಾರಿದೀಪವಾಗಿದೆ ಎಂದರು.

ಇನ್ನು ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಇದು ಇಡಿ ದೇಶವೇ ಮೆಚ್ಚುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಡಾ. ರಾಹುಲ್ ಅವರು, ಶಿವಮೊಗ್ಗದ ಹೆಮ್ಮೆಯಾಗಿದ್ದಾರೆ. ನಾಳೆ ರಾಜ್ಯದ ದೇಶದ. ಹೆಮ್ಮೆ ಆಗಲಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು, ಚಿಕ್ಕ ವಯಸ್ಸಿನಲ್ಲಿ ಉನ್ನತ ಮಟ್ಟಕ್ಕೇರಿದ್ದಾರೆ. ಯುವ ಪೀಳಿಗೆಗೆ ಈ ಪುಸ್ತಕವನ್ನು ಉಪಯೋಗಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ರೈಸ್ ದಿ ಬಾರ್ ಪುಸ್ತಕ ರಚಿಸಿರುವ ಡಾ. ರಾಹುಲ್ ದೇವರಾಜ್ ಮಾತನಾಡಿ, ಜೀವನ ಅಂದರೆ ಏನು ಎಂಬುದರ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖವಿದೆ. ಸಮುದ್ರದ ತಟಕ್ಕೆ ಹೋಗುವುದು ಬೇರೆ, ಅಲೆಗಳ ಮೇಲೆ ಈಜುವುದು, ತೇಲುವುದು ಬೇರೆ, ಆದರೆ, ಆಳಕ್ಕೆ ಇಳಿದು ಮುತ್ತನ್ನ ತರುವ ರೀತಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಯುವಕರಿಗೆ ಕಿವಿಮಾತು ಹೇಳಿದರು. ಈ ಮೂಲಕ ಜೀವನದಲ್ಲಿ ಯಶಸ್ಸು ಕಾಣುವ ಬಗ್ಗೆ ಈ ಪುಸ್ತಕದಲ್ಲಿ ಇದೆ. ಯಶಸ್ಸು ಕಾಣುವುದು ಕೇವಲ ಹಣ ಗಳಿಸುವುದಕ್ಕಲ್ಲ ನೆಮ್ಮದಿ ಕೂಡ ಅಗತ್ಯವಾಗಿದೆ. ಕೇವಲ ಜೀವನ ರೂಪಿಸಿಕೊಳ್ಳುವುದಲ್ಲ. ಹೇಗೆ ರೂಪಿಸಿಕೊಳ್ಳಬೇಕೆಂಬ ದೂರದೃಷ್ಟಿ ಇಟ್ಟುಕೊಳ್ಳಬೇಕು ಎನ್ನುವುದು ಇಂದಿನ ದಿನ ಅಗತ್ಯವಾಗಿದೆ. ಸಕ್ಸಸ್ ಎಂಬುದು ಜೀವನದ ದಾರಿಯಲ್ಲಿ ಕಾಣಬೇಕು. ನಮ್ಮ ಜೀವನ ಬೇರೆಯವರಿಗಾಗಿ ಬದುಕಿ ನಮ್ಮ ಜೀವನ ರೂಪಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಈ ಪುಸ್ತಕ ರಚಿಸಲಾಗಿದೆ ಎಂದರು. ಅಲ್ಲದೇ ಈ ಪುಸ್ತಕದ ಲಾಭದಲ್ಲಿ 30 ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಪೌಷ್ಟಿಕ ಆಹಾರ ವಿತರಿಸುವ ಕಾರ್ಯ ಕೈಗೊಳ್ಳಲಾಗಿದ್ದು, ಈ ಪುಸ್ತಕವನ್ನು ಗುರುತಿಸಿ ಡಿಆರ್ಡಿಸಿ ವತಿಯಿಂದ ರವೀಂದ್ರನಾಥ್ ಠಾಗೋರ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ ಎಂದು ಸಂತಸ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಸೂಡಾದ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಬಿಜೆಪಿ ಯುವ ಮುಖಂಡ ಕೆ.ಈ. ಕಾಂತೇಶ್, ಆರ್ಸಿಹೆಚ್ ಅಧಿಕಾರಿ ಡಾ. ನಾಗರಾಜ್ ನಾಯ್ಕ್, ಮಂಡೇನಕೊಪ್ಪ ದೇವರಾಜ್, ಎಸ್.ಹೇಮಾವತಿ, ಉಪಸ್ಥಿತರಿದ್ದರು.