*
ಶಾಲೆಗಳು ಕತ್ತಲನ್ನು ಓಡಿಸುವ ಮತ್ತು ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವ ಸಂಸ್ಥೆಗಳಾಗಬೇಕು. ದೇಶಕ್ಕೆ ಉತ್ತಮ ನಾಗರೀಕರನ್ನಾಗಿ ರೂಪಿಸುವ ಕೆಲಸ ವಿದ್ಯಾಸಂಸ್ಥೆಗಳು ಮಾಡಬೇಕೆಂದು, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಅಭಿಪ್ರಾಯ ಪಟ್ಟರು. ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆ.ಹೆಚ್. ಪಟೇಲ್ ಬಡಾವಣೆಯ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ಕಲಾ ಉತ್ಸವ 2022-23ಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕಲೆಯಲ್ಲಿ, ಕ್ರೀಡೆಯಲ್ಲಿ ಪ್ರತಿಭೆ ತೋರಿಸಿ ಶಾಲೆಗೆ ಕೀರ್ತಿ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದ್ದು, ಇದು ಇನ್ನು ಹೆಚ್ಚಾಗಿಸುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಕಿವಿಮಾತು ಹೇಳಿದರು. ಪೋಷಕರು, ನಾಗರೀಕರು, ಶಿಕ್ಷಕರು ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿಸುವ ನಿಟ್ಟಿನಲ್ಲಿ ತಾವು ತೊಡಗಿಸಿಕೊಳ್ಳಬೇಕು. ಯುವ ಪೀಳಿಗೆಯನ್ನು ಸಧೃಢಗೊಳಿಸಿ, ಈ ಹಂತದಲ್ಲಿ ಭದ್ರ ಬುನಾದಿ ಹಾಕುವ ಮಹತ್ತರ ಜವಬ್ದಾರಿ ಸಂಸ್ಥೆಯ ಅಧಿಕಾರಿ ವರ್ಗದವರ ಮೇಲಿದೆ. ಈ ನಿಟ್ಟಿನಲ್ಲಿ ಪೋಷಕರು ಕೂಡ ಮುಂದಾಗಬೇಕಿದ್ದು, ಭವಿಷ್ಯದಲ್ಲಿ ಉತ್ತಮ ನಾಗರೀಕರನ್ನಾಗಿಸುವ ಮೂಲಕ ದೇಶಕ್ಕೆ ಉತ್ತಮ ಪ್ರತಿಭೆಗಳನ್ನು ನೀಡುವ ಕೆಲಸ ಮಾಡಬೇಕಿದೆ ಎಂದರು. ಈಗಾಗಲೇ, ಗುರೂಜಿಯವರ ಮಾರ್ಗದರ್ಶನದಲ್ಲಿ ಶಾಲೆ ಉತ್ತಮವಾಗಿ ನಡೆಯುತಲಿದ್ದು, ಪ್ರಗತಿಯ ಹಾದಿಯಲ್ಲಿದ್ದು, ಮತ್ತಷ್ಟು ಉದಾತ್ತ ಸೇವೆ, ಈ ಶಾಲೆ ಮೂಲಕ ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿ.ಇ.ಓ. ನಾಗರಾಜ್ ಮಾತನಾಡಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರವಿಶಂಕರ್ ವಿದ್ಯಾಸಂಸ್ಥೆ ಉತ್ತಮ ಸೇವಾ ಸಂಸ್ಥೆಯಾಗಿ ಹೊರಹೊಮ್ಮಿದೆ. ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣವಾಗದೇ, ಲಾಭದಾಯಕವಾಗದೇ, ಉತ್ತಮ ಶಿಕ್ಷಣ ನೀಡುವ ಸಂಸ್ಥೆಯಾಗಿ ಹೊರಹೊಮ್ಮಬೇಕಿದೆ. ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದಷ್ಟೇ ಅಲ್ಲ. ಅದಕ್ಕೆ ಮಿಗಲಾಗಿ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಯನ್ನು ಸಮಾಜದಲ್ಲಿ ಜವಬ್ದಾರಿ ವ್ಯಕ್ತಿಯನ್ನಾಗಿ ರೂಪುಗೊಳಿಸುವುದಾಗಿದೆ. ಇತ್ತೀಚಿಗೆ ನೂತನ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಕ್ವಾಲಿಟಿ ಶಿಕ್ಷಕರ ಮೂಲಕ ವಿದ್ಯಾರ್ಥಿಯ ವ್ಯಾಸಾಂಗದ ಮೌಲ್ಯ ಕಾಪಾಡಿಕೊಂಡು ಹೋಗಬೇಕಿದೆ. ಇಂದಿನ ಶಿಕ್ಷಣ ಕ್ಷೇತ್ರದಲ್ಲಿ, ನೂತನ ಶಿಕ್ಷಣ ನೀತಿ ಮೂಲಕ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ನಮ್ಮ ವ್ಯವಸ್ಥೆಯಲ್ಲಿ ಕೌಶಲ್ಯಾಭವೃದ್ಧಿಯ ಕೊರತೆ ಇದ್ದು, ವೃತ್ತಿ ಮಾಡುವವರಿಗೆ ಕೌಶಲ್ಯ ನೀಡುವ ಕೆಲಸವೂ ಆಗಬೇಕಿದೆ. ವಿದ್ಯಾರ್ಥಿ ಕೇವಲ ಇಂಜಿನಿಯರಿಂಗ್ ಪದವಿ ಮಾತ್ರ ಪಡೆಯದೇ ಆತ ಕೌಶಲ್ಯದ ಮೂಲಕ ಉತ್ತಮ ನಾಗರೀಕನಾಗಿ, ಸರ್ವತೋಮುಖ ಬೆಳವಣಿಗೆಗೆ ಈ ನೂತನ ಶಿಕ್ಷಣ ನೀತಿ ಸಹಕಾರಿಯಾಗಿದೆ ಎಂದರು. ಮಕ್ಕಳಿಗೆ ಮನೆಯಲ್ಲೂ ಕೂಡ ಕಲಿಕೆಗೆ ಸಹಕಾರಿಯಾಗುವಂತಹ ವಾತಾವರಣ ನಿರ್ಮಾಣ ಮಾಡಿ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ಇದಕ್ಕೂ ಮುನ್ನ ಸಂಸ್ಥೆಯ ನಿರ್ದೇಶಕರಾದ ರಮೇಶ್ ಬಾಬು ಮಾತನಾಡಿದರು. ಧ್ಯಾನ, ಯೋಗ, ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ರವಿಶಂಕರ್ ಆರ್ಟ್ ಆಫ್ ಲಿವಿಂಗ್ ಹಿಂದೆ ಆರಂಭಗೊಂಡಿದ್ದು, ಇದು ಮಕ್ಕಳಲ್ಲೂ ಕಲಿಕೆ ಜೊತೆಗೆ ಕ್ರಿಯಾಶೀಲವಾಗಿರಲು ರವಿಶಂಕರ್ ವಿದ್ಯಾ ಸಂಸ್ಥೆ ಆರಂಭಿಸಲಾಗಿದೆ ಎಂದು ಹೇಳಿದರು. 13 ಮಕ್ಕಳಿಂದ ಆರಂಭವಾದ ನಮ್ಮ ಶಾಲೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಾಧನೆ ಮಾಡುತ್ತಾ ಬಂದಿದೆ ಎಂದು ಹೇಳಿದರು. ಮಕ್ಕಳ ಶ್ರೇಯೋಭಿವೃದ್ಧಿ,ಗೆ ನಮ್ಮ ವಿದ್ಯಾ ಸಂಸ್ಥೆ ಸಹರಿಸಿದ್ದು, ಗುರೂಜಿಯವರ ಕಲ್ಪನೆಯನ್ನು ಈ ಮೂಲಕ ಸಾಕಾರಗೊಳಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ನಿರ್ದೇಶಕರಾದ ಮಹಾದೇವಸ್ವಾಮಿ ವಹಿಸಿದ್ದರು, ವೇದಿಕೆಯಲ್ಲಿ ನಿರ್ದೇಶಕರಾದ ಶಶಿಕುಮಾರ್, ಪ್ರಭಾಕರ್, ಶಾಲೆ ಪ್ರಾಂಶುಪಾಲರಾದ ರಮೇಶ್ ಉಪಸ್ಥಿತರಿದ್ದರು.