ಸಾಗರ : ನಮ್ಮ ನಡುವಿನ ಸಾಧಕರು ನಮಗೆ ಸ್ಪೂರ್ತಿಯಾಗಿರುತ್ತಾರೆ. ಸಾಧಕರನ್ನು ಸನ್ಮಾನಿಸುವುದು ಎಂದರೆ ನಮ್ಮನ್ನು ನಾವು ಗೌರವಿಸಿಕೊಂಡಂತೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಗಣರಾಜ್ಯೋತ್ಸವದಂತಹ ಭವ್ಯ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಮೂಲಕ ಇತರರು ಸಾಧಕರ ಹಾದಿಯಲ್ಲಿ ಸಾಗಲು ಪ್ರೇರಣೆ ನೀಡಿದಂತೆ ಆಗುತ್ತದೆ. ಸಾಗರ ಕ್ಷೇತ್ರ ವೈವಿಧ್ಯತೆಯನ್ನು ಹೊಂದಿದ್ದು ಎಲ್ಲ ಕ್ಷೇತ್ರದಲ್ಲೂ ಸಾಧಕರಿದ್ದಾರೆ. ಊರು ಕಟ್ಟುವ ನಿಟ್ಟಿನಲ್ಲಿ ಅವರೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಸನ್ಮಾನದ ಜೊತೆಗೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅಭಿವ್ಯಕ್ತಗೊಳಿಸಲು ಇಂತಹ ವೇದಿಕೆ ಪೂರಕವಾಗಿದೆ. ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಸಾಗರ ನೀಡಿದ ಕೊಡುಗೆ ಮಹತ್ತರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅ.ರಾ.ಶ್ರೀನಿವಾಸ್ (ಪತ್ರಿಕಾರಂಗ), ಡಾ. ಎಚ್.ಎಸ್. ಮೋಹನ್ (ವೈದ್ಯಕೀಯ), ಎಂ.ನಾಗರಾಜ್ (ಪೌರ ಕಾರ್ಮಿಕ), ಶಾಂತಲಾ ಸುರೇಶ್ (ಶಿಕ್ಷಣ), ಸತ್ಯನಾರಾಯಣ್ (ಸಾಹಿತ್ಯ) ಮತ್ತು ಬಾಲ ಪ್ರತಿಭೆ ಗಗನ ಎಂ. ಅವರನ್ನು ಸನ್ಮಾನಿಸಲಾಯಿತು. ಮತದಾರರ ನೋಂದಾವಣೆಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಪೌರಾಯುಕ್ತ ಎಚ್.ಕೆ.ನಾಗಪ್ಪ ಉಪಸ್ಥಿತರಿದ್ದರು. ಸೇವಾಸಾಗರ ವಿದ್ಯಾಸಂಸ್ಥೆ ಮಕ್ಕಳು ಪ್ರಾರ್ಥಿಸಿದರು. ಗುರುರಾಜ್ ಸ್ವಾಗತಿಸಿದರು. ಮದನ್ ಪ್ರಾಸ್ತಾವಿಕ ಮಾತನಾಡಿದರು. ಮಹೇಶ್ ವಂದಿಸಿದರು. ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. (ಫೋಟೋ-ಗಣರಾಜ್ಯೋತ್ಸವ)