ಶಿವಮೊಗ್ಗ.ಜ.24:

ಕುವೆಂಪು ವಿಶ್ವವಿದ್ಯಾಲಯ ಹಾಗೂ ಗೆಟ್-ಲೆಕ್ಟ್ ಯುನಿಚುಬ್, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಫೆ.4 ರಂದು ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ತಿಳಿಸಿದರು.
ಅವರು ಇಂದು ಮಥುರಾ ಪ್ಯಾರಡೈಸ್‌ನ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಮೇಳದಲ್ಲಿ ರಾಜ್ಯ ಮತ್ತು ದೇಶದ ೪೦ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿದೆ. 30 ವರ್ಷ ವಯೋಮಿತಿಗೊಳಪಟ್ಟ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತರು ಭಾಗವಹಿಸಬಹುದಾಗಿದೆ ಎಂದರು.


ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮೇಳ ನಡೆಯಲಿದ್ದು, 2021 ಹಾಗೂ 2022 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಎಂಬಿಎ, ಬಿಸಿಎ, ಎಂಸಿಎ, ಕಂಪ್ಯೂಟರ್ ಕೋರ್ಸ್, ಡಿಪ್ಲಮೋ, ಐಟಿಐನಲ್ಲಿ ಉತ್ತೀರ್ಣರಾದವರು ಭಾಗವಹಿಸಬಹುದಾಗಿದೆ ಎಂದರು.
ಈ ಮೇಳದಲ್ಲಿ 4900 ಉದ್ಯೋಗಗಳಿಗೆ ಅವಕಾಶವಿದ್ದು, ಪ್ರತಿಷ್ಠಿತ ಸಂಸ್ಥೆಗಳಾದ ಇನ್‌ಫೋಸಿಸ್, ಅಸೆಂಚರ್, ಹೆಚ್‌ಎಸ್‌ಬಿಸಿ, ಹೆಚ್‌ಡಿಎಫ್‌ಸಿ ಬ್ಯಾಂಕ್, ಮುತ್ತೋಟ್ ಫೈನಾನ್ಸ್, ಫ್ಲಿಪ್‌ಕಾರ್ಟ್, ಎಸ್‌ಬಿಐ ಬ್ಯಾಂಕ್, ಕೋಟಕ್ ಮಹೀಂದ್ರ, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್, ಎಲ್&ಟಿ ಫೈನಾನ್ಸ್, ಸೇರಿದಂತೆ ಇನ್ನಿತರ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸುತ್ತಿವೆ. ಈ ಮೇಳದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕುವೆಂಪು ವಿವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗಲಿ ಎನ್ನುವುದು ನಮ್ಮ ಅಪೇಕ್ಷೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಬೆಂಗಳೂರಿನ ಗೆಟ್-ಲೆಕ್ಟ್ ಯುನಿಚುಬ್ ಸಂಸ್ಥೆಯು ಬೃಹತ್ ಉದ್ಯೋಗ ಮೇಳಗಳನ್ನು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಆಯೋಜಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಯು ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ ಮೇಳವನ್ನು ಆಯೋಜಿಸಲಾಗಿದ್ದು, ೪೦ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಇನ್ನು ೧೦ ಸಂಸ್ಥೆಗಳು ನೇರವಾಗಿ ಭಾಗವಹಿಸುತ್ತಿವೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಗೊಳ್ಳುವ ವಿಶ್ವಾಸವಿದ್ದು, ಅಕ್ಟೋಬರ್‌ನಲ್ಲಿ ಇದೇ ತಂಡದಿಂದ ಮತ್ತೆ ಉದ್ಯೋಗಗಳನ್ನು ಆಯೋಜಿಸಲಾಗುವುದು ಎಂದರು.


ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ವೀಣಾ-9731160379, ಡಾ.ರಾಜೇಶ್ವರಿ ಬಾಬು- 9480329762 ಮಂಜು-9480012101 ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಡಾ.ಮಂಜುನಾಥ್, ಪಿಆರ್‌ಒ ಸತ್ಯ ಪ್ರಕಾಶ್, ಪ್ರಾಂಶುಪಾಲರುಗಳಾದ ಪ್ರೊ.ಧನಂಜಯ್, ಪ್ರೊ.ವೀಣಾ, ಪ್ರೊ.ರಾಜೇಶ್ವರಿ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!