ಶಿವಮೊಗ್ಗ: ಎಎಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕೆ.ಕಿರಣ್ ಆಯ್ಕೆಯಾಗಿದ್ದು, ನಗರ ಮಟ್ಟದಲ್ಲಿ ಪಕ್ಷದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ ಎಂದು ಎಎಪಿ ಪಕ್ಷದ ಮುಖಂಡ ಮನೋಹರ ಗೌಡ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಎಪಿ ಪಕ್ಷ ದಿನದಿಂದ ದಿನಕ್ಕೆ ಸಂಘಟನೆಯಾಗುತ್ತಿದೆ. ಪ್ರಾರಂಭದ ದಿನಗಳಲ್ಲಿ ಎಲ್ಲರೂ ನಾಯಕರೇ ಆಗಿದ್ದರು. ಪಕ್ಷದ ಮುಖಂಡರು ಕೂಡ ಎಲ್ಲಾ ಸೇರಿಕೊಂಡು ಕೆಲಸ ಮಾಡಲಿ ಎಂದುಕೊಂಡು ಸುಮ್ಮನಿದ್ದರು. ಸಂಘಟನೆ ಒಂದು ಹಂತಕ್ಕೆ ಬಂದಾಗ ಈಗ ಪಕ್ಷದ ಜಿಲ್ಲಾ ಸಮಿತಿಯನ್ನು ರಾಜ್ಯಾದ್ಯಂತ ರಚಿಸಲಾಗಿದೆ. ರಾಜ್ಯ ಸಮಿತಿಯೂ ಆಗಿದೆ. ಹಾಗಾಗಿ ಇನ್ನುಮುಂದೆ ಬಣಗಳು ಇರುವುದಿಲ್ಲ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ಇತರೆ ಸ್ಥಾನಗಳನ್ನು ಘೋಷಣೆ ಮಾಡಲಾಗಿದೆ. ಜಿಲ್ಲಾಧ್ಯಕ್ಷರಾಗಿ ಕೆ.ಕಿರಣ್ ಆಯ್ಕೆಯಾದರೆ, ಪ್ರಧಾನ ಕಾಂiiದರ್ಶಿಯಾಗಿ ನಜೀರ್ ಅಹ್ಮದ್ ಆಯ್ಕೆಯಾಗಿದ್ದಾರೆ. ಉಳಿದಂತೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಶೀಘ್ರದಲ್ಲಿಯೇ ಕಚೇರಿಯನ್ನು ಪ್ರಾರಂಭಸಿಲಾಗುವುದು ಎಂದರು.

ನೂತನ ಜಿಲ್ಲಾಧ್ಯಕ್ಷ ಕೆ.ಕಿರಣ್ ಮಾತನಾಡಿ, ಎಎಪಿ ಶಿಸ್ತು ಮತ್ತು ಪ್ರಾಮಾಣಿಕ ಪಕ್ಷವಾಗಿದೆ. ನಮ್ಮ ಪಕ್ಷದ ಮುಖ್ಯ ಗುರಿಯೇ ಪ್ರಾಮಾಣಿಕತನ. ಹಾಗಾಗಿಯೇ ಪಕ್ಷ ಪ್ರಾಮಾಣಿಕರನ್ನು ಗುರುತಿಸಿ ಟಿಕೆಟ್ ನೀಡಲಿದೆ. ಶಿವಮೊಗ್ಗ ನಗರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಈ ಪೈಪೋಟಿ ಆರೋಗ್ಯಕರವಾಗಿದೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಯಾರಿಗೆ ಸಿಕ್ಕರೂಕೂಡ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ನಾನು ಜಿಲ್ಲಾಧ್ಯಕ್ಷನಾಗಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಯುವಕರು ಪಕ್ಷದ ಆಸ್ತಿಯಾಗಿದ್ದಾರೆ. ಅವರನ್ನು ಹೆಚ್ಚು ಆಕರ್ಷಿತರನ್ನಾಗಿ ಮಾಡಿ, ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು. ಶಿವಮೊಗ್ಗ ನಗರದಲ್ಲಿ ೫೦ಸಾವಿರ ಜನರಿಗೆ ಒಂದು ಬ್ಲಾಕ್ನಂತೆ ಒಟ್ಟು ೫ ಬ್ಲಾಕ್ ರಚಿಸಿ ಅದಕ್ಕೆಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ ವಾರ್ಡ್ ಮತ್ತು ಬೂತ್ ಮಟ್ಟದ ಕಮಿಟಿಗಳು ಕೂಡ ರಚನೆಯಾಗುತ್ತದೆ ಎಂದರು,
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿಕಿಶನ್, ಶಿವಕುಮಾರ್, ನಜೀರ್ ಅಹ್ಮದ್, ಸುರೇಶ್ ಕೌಟಿಕರ್, ಹರೀಶ್ ಮತ್ತಿತರರಿದ್ದರು.
