ಶಿವಮೊಗ್ಗ.ಜ.೨೪:
ಶಿವಮೊಗ್ಗದ ವೈದ್ಯ ಡಾ.ರಾಹುಲ್ ದೇವರಾಜ್ ಅವರು ರಚಿಸಿರುವ ರೈಸ್ ದಿ ಬಾರ್ ಪುಸ್ತಕ ಬಿಡುಗಡೆ ಸಮಾರಂಭವು ಜ.26ರಂದು ಸಂಜೆ 6ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆ ಯಲಿದೆ.
ಶ್ರೀ ಕ್ಷೇತ್ರ ಬಂಗಾರಮಕ್ಕಿ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸೂಡಾದ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಬಿಜೆಪಿ ಯುವ ಮುಖಂಡ ಕೆ.ಈ.ಕಾಂತೇಶ್, ವಾಸವಿ ವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ಆರ್‌ಸಿಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್, ನಿವೇದನ್ ನೆಂಪೆ ಆಗಮಿಸಲಿದ್ದಾರೆ.
ರೈಸ್ ದಿ ಬಾರ್ ಒಂದು ಸ್ಫೂರ್ತಿದಾಯಕ ಸೆಲ್ಫ್ ಹೆಲ್ಪ್ ಪುಸ್ತಕವಾಗಿದ್ದು, ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲಾಗಿದೆ. ಹೆಸರೇ ಸೂಚಿಸುವಂತೆ ಜೀವನ ಮೌಲ್ಯಗಳನ್ನು ಹೆಚ್ಚಿಸುವ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ಜೀವನ, ಟೈಂ ಮ್ಯಾನೇಜ್‌ಮೆಂಟ್, ದುಡಿಮೆ ಹಾಗೂ ಹೂಡಿಕೆ, ಸೋಲು ಹಾಗೂ ಅವಮಾನಗಳನ್ನು ಎದುರಿಸುವುದು ಹೇಗೆ? ಅಹಂ, ಉತ್ತಮ ಹವ್ಯಾಸಗಳ ಕುರಿತು, ಆರೋಗ್ಯದ ಕುರಿತು ಮನಮುಟ್ಟುವ ರೀತಿಯಲ್ಲಿ ಅತ್ಯಂತ ಪ್ರಸ್ತುತವಾಗಿ ವಿವರಿಸಲಾಗಿದೆ ಎಂದು ಪುಸ್ತಕದ ಲೇಖಕ ಡಾ. ರಾಹುಲ್ ದೇವರಾಜ್ ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಎಲ್ಲಾ ವಯಸ್ಕರಿಗೂ ಪ್ರಸ್ತುತ ಎನಿಸುವ ಪುಸ್ತಕವಾಗಿದ್ದರೂ ಸಹ ವಿಶೇಷವಾಗಿ ಪ್ರತಿಯೊಬ್ಬ ಯುವಕ-ಯುವತಿಯರು ಓದಲೇಬೇಕಾದ ಕೃತಿಯಾಗಿದೆ. ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಪುಸ್ತಕ ಮೇಳಕ್ಕೆ ಆಯ್ಕೆಗೊಂಡ 20ಸೆಲ್ಫ್ ಹೆಲ್ಪ್ ಪುಸ್ತಕಗಳ ಪೈಕಿ ನನ್ನ ಪುಸ್ತಕವು ಒಂದಾಗಿದೆ ಎಂದ ಅವರು, ಈ ಪುಸ್ತಕದಿಂದ ಬಂದ ಲಾಭವನ್ನು ಕ್ಷಯ ರೋಗಿ ಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಸಹಾಯ ಮಾಡಲು ಉಪಯೋಗಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಂಡೇನ ಕೊಪ್ಪ ದೇವರಾಜ್, ಎಸ್.ಹೇಮಾವತಿ, ತಿಪ್ಪೇಶ್ ನಾಯ್ಕ್ ಉಪಸ್ಥಿತರಿದ್ದರು
ಲೇಖಕರ ಪರಿಚಯ: ಡಾ.ರಾಹುಲ್ ದೇವರಾಜ್‌ರವರು, ಸೂಡಾ ಮಾಜಿ ಸದಸ್ಯ, ಬಿಜೆಪಿ ಮುಖಂಡ ಮಂಡೇನಕೊಪ್ಪ ದೇವರಾಜ್ ಹಾಗೂ ಎಸ್.ಹೇಮಾವತಿ ದಂಪತಿ ಜ್ಯೇಷ್ಠ ಪುತ್ರರಾಗಿದ್ದು, ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು ಪುಣೆಯ ಸಿಂಬಯೋಸಿಸ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕಾರಿಪುರದ ಹಿತ್ತಲ ಹಾಗೂ ಊರುಗಡೂರು ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
೬ ವಿಶ್ವ ದಾಖಲೆಗಳು, ಕೋವಿಡ್ ರೋಗಿಗಳಿಗೆ ಮ್ಯೂಸಿಕ್ ಥೆರಫಿ ನೀಡಿದ ವಿಶ್ವದ ಮೊದಲ ವೈದ್ಯ ಹಾಗೂ ೧ ನಿಮಿಷ ಮತ್ತು ೩೦ ಸೆಕೆಂಡ್‌ನಲ್ಲಿ ಅತಿ ಹೆಚ್ಚು ಪುಶ್‌ಅಪ್ಸ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. 2018 ರ ಭೀಕರ ಕೊಡಗು ಭೂ ಕುಸಿತ ಸಂದರ್ಭದಲ್ಲಿ ಸಹಾಯಹಸ್ತ ಚಾಚಿದ ಮೊದಲ ವೈದ್ಯರ ತಂಡ ಇವರದ್ದಾಗಿದೆ. ಕೇವಲ 50 ರೂ.ಗೆ ಉತ್ತಮ ಚಿಕಿತ್ಸೆ ಹಾಗೂ ಔಷಧಿ ಪೂರೈಕೆ, ಸುಮಾರು 50 ಉಚಿತ ಆರೋಗ್ಯ ಶಿಬಿರ ನಡೆಸಿದ್ದು,30 ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಪೌಷ್ಟಿಕ ಆಹಾರ ವಿತರಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಪುಸ್ತಕವನ್ನು ಗುರುತಿಸಿ ಡಿಆರ್‌ಡಿಸಿ ವತಿಯಿಂದ ರವೀಂದ್ರನಾಥ್ ಠಾಗೋರ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ.