
ಎನ್ಇಎಸ್ ನ ವಿಶೇಷ ಕಾರ್ಯಕ್ರಮ: ಉಪನ್ಯಾಸ ಮಾಲಿಕೆ
ಶಿವಮೊಗ್ಗ,ಜ.23:
ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಹಾರಿಸಿರುವ ಉಪಗ್ರಹಗಳಿಂದ ರಕ್ಷಣಾ ವ್ಯವಸ್ಥೆಯಿಂದ ಹಿಡಿದು ಹತ್ತಾರು ಕ್ಷೇತ್ರಗಳಲ್ಲಿ ಉಪಯೋಗ ಆಗುತ್ತಿದೆ. ಉಪಗ್ರಹ ಉಡಾವಣೆಗೆ ಮಾಡಿರುವ 1 ಪೈಸೆ ಖರ್ಚಿನಲ್ಲಿ 3 ಪೈಸೆ ದೇಶಕ್ಕೆ ವಾಪಾಸ್ ಸಿಗುತ್ತಿದೆ ಎಂದು ಪದ್ಮಭೂಷಣ ಪುರಸ್ಕೃತ ಬಾಹ್ಯಾಕಾಶ ವಿಜ್ಞಾನಿ ಡಾ.ಬಿ.ಎನ್.ಸುರೇಶ್ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತ ಮಹೋತ್ಸವದ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ಇಂದು ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯ 09ನೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರಕ್ಕೆ ಬಾಹ್ಯಾಕಾಶ ತಂತ್ರಜ್ನಾನದ ಕೊಡುಗೆ, ಅಂದು-ಇಂದು-ಮುಂದು ಕುರಿತು ಮಾತನಾಡಿದರು.
ಬಹಳಷ್ಟು ಜನರು ರಾಕೇಟ್ ಉಡಾವಣೆ, ಉಪಗ್ರಹ ಉಡಾವಣೆಗೆ ಇಸ್ರೋ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಅಷ್ಟೆಲ್ಲಾ ಖರ್ಚು ಮಾಡುವುದರಿಂದ ದೇಶಕ್ಕೆ ಹಾಗೂ ಜನರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಾರೆ. ದೇಶದ ಜನರು ಬಳಸುತ್ತಿರುವ ಮೊಬೈಲ್, ಟಿವಿ, ಜಿಪಿಎಸ್ ವ್ಯವಸ್ಥೆ, ಹವಾಮಾನ ವರದಿಗಳು, ಹವಾಮಾನ ಮುನ್ಸೂಚನೆಗಳು, ಚಂದ್ರಯಾನ ಮತ್ತು ಮಂಗಳಯಾನ, ಬ್ಯಾಂಕಿಂಗ್, ಎಟಿಎಂ ಯಂತ್ರಗಳು, ಷೇರು ಮಾರುಕಟ್ಟೆ ಎಲ್ಲವೂ ಉಪಗ್ರಹಗಳ ಕಾರ್ಯದಿಂದ ಸುಗಮವಾಗಿ ನಡೆಯುತ್ತಿವೆ. ಈ ಉಪಗ್ರಹಗಳು ಒಂದು ಗಂಟೆ ಕಾರ್ಯಾಚರಣೆ ನಿಲ್ಲಿಸಿದರೂ ಅದು ಉಂಟು ಮಾಡುವ ಪರಿಣಾಮ ಊಹಾತೀತ ಎಂದರು.
1962 ರಲ್ಲಿ ತಿರುವನಂತಪುರದಲ್ಲಿ ವಿಕ್ರಂ ಸಾರಾಬಾಯಿ ಅವರು ಇಸ್ರೋ ಸ್ಥಾಪನೆ ಮಾಡಿದರು. ಮೊದಲ ಅಧ್ಯಕ್ಷರೂ ಆಗಿದ್ದರು. ಅವರನ್ನು ಬಾಹ್ಯಾಕಾಶ ಪಿತಾಮಹ ಎಂದು ಕರೆಯುತ್ತೇವೆ. ಅವರ ಅವಯಲ್ಲಿ ಕೇವಲ 200 ಮಿಮೀ ವ್ಯಾಪ್ತಿಯ ಸಣ್ಣ ಸಣ್ಣ ರಾಕೆಟ್ಗಳನ್ನು ಮಾತ್ರವೇ ಬಾಹ್ಯಾಕಾಶಕ್ಕೆ ಹಾರಿಸಲಾಗುತ್ತಿತ್ತು ಎಂದರು.

ಕಳೆದ ಐದು ದಶಕದಲ್ಲಿ ಇಸ್ರೋ ಇತರೆ ದೇಶಗಳಿಗೆ ಸರಿಸಮಾನವಾದ ಶಕ್ತಿಯನ್ನು ಗಳಿಸಿದೆ. ಅಮೇರಿಕಾ, ರಷ್ಯಾ, ಚೀನಾ, ಜಪಾನ್ ಮೊದಲಾದ ದೇಶಗಳ ಸಮಾನವಾದ ತಾಂತ್ರಿಕತೆಯನ್ನು ಹೊಂದಿದೆ. ತನ್ನದೇ ಸ್ವಂತ ಶಕ್ತಿಯ ಮೇಲೆ ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಎಲ್ಲಾ ಪರಿಶ್ರಮದ ಹಿಂದೆ ವಿಕ್ರಂ ಸಾರಾಬಾಯಿ, ಸತೀಶ್ ‘ವನ್, ಅಬ್ದುಲ್ ಕಲಾಂ, ಯುಆರ್ ರಾವ್ ಮೊದಲಾದವರ ಶ್ರಮ ಇದೆ ಎಂದರು.
ಸದ್ಯ ಇಸ್ರೋ ಹಾರಿಬಿಟ್ಟಿರುವ 58 ಉಪಗ್ರಹಗಳು ಜೀವಂತವಾಗಿವೆ. ಕೇವಲ ನಮ್ಮ ದೇಶದ್ದು ಮಾತ್ರವಲ್ಲದೇ ಬೇರೆ ದೇಶಗಳ ಉಪಗ್ರಹಗಳನ್ನೂ ಉಡ್ಡಯನ ಮಾಡಲಾಗುತ್ತಿದೆ. ಈವರೆಗೆ 35 ದೇಶಗಳ 340 ಕ್ಕೂ ಹೆಚ್ಚು ಉಪಗ್ರಹಗಳನ್ನು ಇಸ್ರೋ ಹಾರಿಸಿದೆ. ಉಪಗ್ರಹ ಉಡ್ಡಯನದ ಖರ್ಚು ನಮ್ಮಲ್ಲಿ ಕಡಿಮೆ ಇದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಖಜಾಂಚಿ ಡಿ.ಜಿ.ರಮೇಶ್, ಉಪಾಧ್ಯಕ್ಷ ಸಿ.ಆರ್.ನಾಗರಾಜ್ ಉಪಸ್ಥಿತರಿದ್ದರು.
