ಶಿವಮೊಗ್ಗ: ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ಪನ ಕೊಲೆಗೆ‌ ಮಕ್ಕಳೇ ಸುಪಾರಿ ನೀಡಿ ಕೊಲೆ ಮಾಡಿಸಿದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.


ಕೆಎಸ್‌ಆರ್ ಪಿ ಯ ನಿವೃತ್ತ ಎಆರ್ ಎಸ್‌ಐ ನಾಗೇಂದ್ರಪ್ಪ ಅವರು ಕೊಲೆಯಾದ ವ್ಯಕ್ತಿ.

ಘಟನೆಯ ವಿವರ:
ನವೆಂಬರ್ 29 ರಂದು ಶಿರಾಳಕೊಪ್ಪದಲ್ಲಿ ಚರಂಡಿಯಲ್ಲಿ ಶವವೊಂದು ಸಿಕ್ಕಿತ್ತು. ಕೆಎಸ್‌ಆರ್ ಪಿ ನಿವೃತ್ತ ಎಆರ್ ಎಸ್‌ಐ, ಶಿವಮೊಗ್ಗದ ಶಿರಾಳಕೊಪ್ಪದ ಭೋಗಿ ಗ್ರಾಮದ ನಾಗೇಂದ್ರಪ್ಪ ಅವರ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ಇದರ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ನಾಗೇಂದ್ರಪ್ಪ ಅವರು ವಾಸದ ಮನೆಯನ್ನು 2ನೇ ಹೆಂಡತಿ ಹೆಸರಿಗೆ ಮಾಡಿದ್ದರು. ಬಳಿಕ ಜಮೀನನ್ನು ಕೂಡಾ 2ನೇ ಹೆಂಡತಿ- ಮಗುವಿಗೆ ವರ್ಗಾವಣೆ ಮಾಡುತ್ತಾರೆ ಎಂದು ಮೊದಲ ಹೆಂಡತಿ ಮಕ್ಕಳಾದ ಮಂಜುನಾಥ್, ಉಮೇಶ್ ಅವರು ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದು, ಭೋಗಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬುವರಿಗೆ ಸುಪಾರಿ ನೀಡಿದ್ದಾರೆ.

ಭದ್ರಾವತಿ ಕೋರ್ಟ್ ಗೆ ಹೋಗಿ ನಾಗೇಂದ್ರಪ್ಪ ಅವರು ವಾಪಾಸ್ ಶಿಕಾರಿಪುರಕ್ಕೆ ಬರುತ್ತಿದ್ದ ವೇಳೆ ಆರೋಪಿಗಳು ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದರು. ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದು, ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದಾರೆ. ಬಳಿಕ ಉಸಿರುಗಟ್ಟಿಸಿ ಸಾಯಿಸಿ, ಅದೇ ಆಟೋದಲ್ಲಿ ಶವ ಸಾಗಾಟ ಮಾಡಿದ್ದಾರೆ. ಬಳಿಕ ಆರೋಪಿಗಳು ಉಡುಗಣಿ ಗ್ರಾಮದಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಶವ ಎಸೆದಿದ್ದಾರೆ.


ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಮಂಜುನಾಥ್, ಉಮೇಶ್, ರಿಜ್ವಾನ್, ಹಬೀಬ್ ಉಲ್ಲಾ ಹಾಗೂ ಸುಹೇಲ್ ಬಾಷಾ ಪೊಲೀಸರ ಅತಿಥಿಯಾಗಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!