ಶಿವಮೊಗ್ಗ,ಡಿ.13:
ವಿದೇಶಿಯರನ್ನು ಹಾಡಿಹೊಗಳಿರುವ ಪಠ್ಯಗಳನ್ನು ಇದುವರೆಗೂ ಮಕ್ಕಳಿಗೆ ಬೋಧಿಸಿದ್ದಾಗಿದೆ. ಇನ್ನು ಮುಂದಾದರೂ ಭಾರತೀಯ ಪರಂಪರೆ, ಸಂಸ್ಕೃತಿ, ಅಧ್ಯಾತ್ಮದ ಬಗ್ಗೆ ಪಠ್ಯಗಳಲ್ಲಿ ಅಳವಡಿಸಬೇಕಿದೆ ಎಂದು ವಾಗ್ಮಿ ಹಾಗೂ ಅಂಕಣಕಾರ ಆದರ್ಶ ಗೋಖಲೆ ಹೇಳಿದರು.


ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಅವರ ಶ್ರೀವಾದಿರಾಜರ ತೀರ್ಥಪ್ರಬಂಧ ಸಂಶೋಧನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪಠ್ಯಪುಸ್ತಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಹೊರಟಾಗ ವಿರೋಧ ವ್ಯಕ್ತವಾಗಿತ್ತು. ಇದನ್ನು ಎದುರಿಸಲಾಗದೆ ನಾವು ಸುಮ್ಮನಾಗಿ ಬಿಡುತ್ತೇವೆ. ಜ್ಞಾನಿಗಳು ಮೌನ ವಹಿಸುವುದರಿಂದಲೇ ತಪ್ಪುಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಅವಕಾಶ ನೀಡದೆ ಪಠ್ಯಗಳಲ್ಲಿ ನಮ್ಮ ತೀರ್ಥಕ್ಷೇತ್ರಗಳ ಬಗ್ಗೆ, ಋಷಿ ಮುನಿಗಳ ಬಗ್ಗೆ ತಿಳಿಸಬೇಕಿದೆ ಎಂದರು.


ಈ ನಾಡಿನ ಅಧ್ಯಾತ್ಮ ಪರಂಪರೆಯನ್ನು ಸ್ಥೂಲವಾಗಿ ತಿಳಿಸುವ ಗ್ರಂಥ ಇದಾಗಿದೆ. ಈ ಗ್ರಂಥವನ್ನು ಓದಿದ ಮೇಲೆ ಇತಿಹಾಸವನ್ನು ತಿಳಿದುಕೊಳ್ಳಲು ತೀರ್ಥಕ್ಷೇತ್ರಗಳಿಗೆ ಹೋಗಿ ಎಂದು ಮಕ್ಕಳಿಗೆ ಹೇಳಬೇಕಿದೆ. ಹಿಂದೆ ಋಷಿ ಮುನಿಗಳು ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಧರ್ಮ ಪ್ರತಿಷ್ಠಾಪಿಸುವ ಕೆಲಸ ಮಾಡಿದ್ದರು. ಅಂದು ಮಾಡಿದ ಕೆಲಸದ ರೀತಿಯಲ್ಲಿಯೇ ಮೈತ್ರೇಯಿ ಈ ಗ್ರಂಥದ ಮೂಲಕ ತೀರ್ಥ ಕ್ಷೇತ್ರಗಳ ಪ್ರವೇಶಿಕೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಬಂದ ಸಿನಿಮಾ ನಗರ ಪ್ರದೇಶದಲ್ಲಿರುವ ಗ್ರಾಮೀಣರನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ವಿಶಿಷ್ಟವಾದ ಶಕ್ತಿ ನಂಬಿದ ದೈವದಲ್ಲಿದೆ ಎಂಬುದನ್ನು ಈ ಚಿತ್ರ ನಿರೂಪಿಸಿದೆ. ಅದೇ ರೀತಿಯಲ್ಲಿ ಅಧ್ಯಾತ್ಮದ ಭಾರತ ದರ್ಶನವನ್ನು ಈ ಕೃತಿ ಮಾಡಿದೆ. ಶ್ರೇಷ್ಠವಾದ ಸಾಲಿನಲ್ಲಿ ನಿಲ್ಲುವಂತಹ ಗ್ರಂಥ ಇದಾಗಿದೆ. ಇಡೀ ಭಾರತದ ತೀರ್ಥಕ್ಷೇತ್ರಗಳನ್ನು ಜೋಡಿಸುವ ಕೆಲಸ ಇದರಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಅಧ್ಯಾತ್ಮದ ಹಸಿವು ವಿದೇಶಿಯರನ್ನು ಭಾರತ ಕೈಬೀಸಿ ಕರೆಯುತ್ತಿದೆ. ಮನಸ್ಸಿಗೆ ಶಾಂತಿ ಸಿಕ್ಕುವ ಅಧ್ಯಾತ್ಮ ಈ ದೇಶದಲ್ಲಿ ವಿದೇಶಿಯರಿಗೆ ಸಿಕ್ಕುತ್ತಿದೆ. ಹೀಗಾಗಿಯೇ ಈ ದೇಶವನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಇಲ್ಲಿರುವ ತೀರ್ಥಕ್ಷೇತ್ರಗಳು ಹಾಗೂ ಸಂಸ್ಕೃತ ಗ್ರಂಥಗಳ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದಾರೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಜರ್ಮನ್ನರು ಸಂಸ್ಕೃತವನ್ನು ಹೆಚ್ಚು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೂಲ ಸಂಸ್ಕೃತವನ್ನು ಕಲಿಯಲು ಭಾರತೀಯರು ಜರ್ಮನಿಗೆ ಬರಲಿದ್ದಾರೆ ಎಂಬುದನ್ನು ಅವರೇ ಹೇಳುತ್ತಿದ್ದಾರೆ. ಇದು ನಮ್ಮಲ್ಲಿ ಸಂಸ್ಕೃತದ ಬಗ್ಗೆ ಇರುವ ಉದಾಸೀನತೆಗೆ ಕಾರಣವಾಗಿದೆ ಎಂದರು.
ಅಚ್ಯುತ ಯೋಗ ವಿದ್ಯಾ ಪೀಠದ ಬೆಣ್ಣೆ ಭಾಸ್ಕರ ರಾವ್ ಗ್ರಂಥಲೊಕಾರ್ಪಣೆ ಮಾಡಿ ಮಾತನಾಡಿ, ಶ್ರೀ ವಾದಿರಾಜರು ತಮ್ಮ ತಾಯಿಯ ಆಸೆಯಾದ ಲಕ್ಷ್ಯ ತುಳಸಿ ಅರ್ಚನೆಯನ್ನು ಹರಿಯ ಲಕ್ಷತುತಿಯನ್ನು ರಚಿಸುವುದರ ಮೂಲಕ ಈಡೇರಿಸಿದರು. ಪ್ರಸ್ತುತ ಸಂದರ್ಭ ಹೇಗೆ ಒದಗಿ ಬಂದಿದೆ ಎಂದರೆ ಲಕ್ಷಸ್ತುತಿಯ ಮುಖಾಂತರ ಲಕ್ಷಾರ್ಚನೆ ಮಾಡಿದ ವಾದಿರಾಜರು ಅವರ ಗ್ರಂಥವನ್ನು ಇಂದು ಬಿಡುಗಡೆ ಮಾಡುವ ಸ್ಥಳವೂ ಲಕ್ಷ ಮೋದಕಯಾಗ ನಡೆಯುತ್ತಿರುವ ಸ್ಥಳವಾಗಿದೆ. ನಮ್ಮ ದೇಶದಲ್ಲಿರುವ ಅನೇಕರಿಗೆ ಆರ್ಥಿಕವಾದ ದೈಹಿಕವಾದ ದುರ್ಬಲತೆಯ ಕಾರಣದಿಂದಾಗಿ ತೀರ್ಥಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಅಂತವರಿಗಾಗಿ ಗುರುಗಳು ರಚಿಸಿದ ಈ ಕೃತಿಯನ್ನು ಸರಳವಾಗಿ ನಮ್ಮ ಕೈಯಲ್ಲಿ ಮೈತ್ರೇಯಿ ಅವರು ಇರಿಸಿದ್ದಾರೆ.
ಭಕ್ತಿಯ ಪಾರಣ್ಯತೆಗಿಂತ ಪ್ರಯಾಣದ ಪ್ರಯಾಸ, ಗದ್ದಲಗಳು ಇವೆಲ್ಲ ಮನಸ್ಸಿನಲ್ಲಿ ತೀರ್ಥಕ್ಷೇತ್ರ ಯಾತ್ರೆಯ ಸಂದರ್ಭದಲ್ಲಿ ಆಗುತ್ತವೆ . ಆದರೆ ಈ ಗ್ರಂಥ ಓದುವುದರಿಂದ ಮನಸ್ಸಿನಲ್ಲಿ ನಮಗೆ ಭಕ್ತಿಯ ಪರಾಕಾಷ್ಟೆ ಉಳಿಯುವಂತೆ ಮಾಡುತ್ತದೆ ಎಂದರು.
ವೇದಿಕೆಯಲ್ಲಿ ಲೇಖಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್, ಸಿದ್ಧಾರ್ಥ್, ಆದಿತ್ಯಪ್ರಸಾದ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!