ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕಾನೂನು ಬದ್ಧವಾಗಿ ಭೂ ಹಕ್ಕು ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಾ ಸಮಿತಿ ವತಿಯಿಂದ ನ.28 ರಂದು ಆಯನೂರಿನಿಂದ ಜನಾಕ್ರೋಶ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಆಯನೂರಿನಿಂದ ಪಾದಯಾತ್ರೆ ಹೊರಟು ಬಸ್ ನಿಲ್ದಾಣದ ಅಶೋಕ ವೃತ್ತ, ಅಮೀರ್ ಅಹ್ಮದ್ ವೃತ್ತ, ಮಹಾವೀರ ವೃತ್ತದ ಮೂಲಕ ಪಾದಯಾತ್ರೆ ಸಂಜೆ 4 ಗಂಟೆಗೆ ಎನ್ ಇಎಸ್ ಮೈದಾನ ತಲುಪಲಿದೆ ಎಂದರು.
ಸಮಾವೇಶದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಸೇರಿದಂತೆ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಮುಳುಗಡೆ ಸಂತ್ರಸ್ತರು ಕೂಡ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಹೈಕೋರ್ಟ್ ಸೂಡೂರು ಹಾಗೂ ಕೂಡಿ ಎರಡು ಸರ್ವೇ ನಂಬರ್ಗಳಲ್ಲಿ ಡಿನೋಟಿಫೀಕೇಶನ್ ವಜಾ ಮಾಡಿದರೆ ರಾಜ್ಯ ಸರ್ಕಾರ ಎಲ್ಲಾ 56 ನೋಟಿಫೀಕೇಶನ್ಗಳನ್ನು ವಜಾ ಮಾಡಿದೆ. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಮೂಲಕ ನ್ಯಾಯಲಯಕ್ಕೆ ಸಂತ್ರಸ್ತರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ ಎಂದರು.
ಕಾಂಗ್ರೆಸ್ನಿಂದ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಸಭೆ ನಡೆಸುತ್ತಿದ್ದಂತೆ ಬಿಜೆಪಿಯವರು ಕೂಡ ನ.11 ರಂದು ಶಿವಮೊಗ್ಗದಲ್ಲಿ ಸಭೆ ನಡೆಸಿ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ 15 ದಿನಗಳ ಗಡುವು ಮುಗಿದು ಹೋಗಿದೆ. ಒಂದೇ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ರೀತಿ ಹೇಳಿದರೆ ಸಂಸದರು ಇನ್ನೊಂದು ರೀತಿ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಮಾಡಿದ್ದಾರೆ ಎಂದರು

ಜಿಲ್ಲೆಗೆ ನಿನ್ನೆ ಆಗಮಿಸಿದ್ದ ಮುಖ್ಯಮಂತ್ರಿಗಳೂ ಕೂಡ ಸಮರ್ಪಕ ಭರವಸೆ ನೀಡುವಲ್ಲಿ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಹೇಳಿಲ್ಲ. ಒಂದು ದಿನವೂ ಮಲೆನಾಡಿನ ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡದ ಬಿಜೆಪಿ ಚುನಾವಣೆ ಬರುತ್ತಿದ್ದಂತೆ ಈಗ ಮಾತನಾಡುತ್ತಿದೆ ಎಂದು ದೂರಿದರು.
ಮಲೆನಾಡು ಭಾಗದ ರೈತರು ಮನೆ, ಕೃಷಿ ಭೂಮಿ ಹಕ್ಕು ಪತ್ರಕ್ಕಾಗಿ ವಿವಿಧ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ವಜಾಗೊಳಿಸುವ ಕೆಲಸ ಈ ಸರ್ಕಾರದಿಂದ ಆಗಿದೆ. ಕಸ್ತೂರಿ ರಂಗನ್ ವರದಿ ತೂಗು ಕತ್ತಿಯಾಗಿದೆ. ಮುಖ್ಯಮಂತ್ರಿಯಿಂದಲೂ ರೈತರಿಗೆ ಧೈರ್ಯ ತುಂಬುವ ಕೆಲಸವಾಗಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಕಲಗೋಡು ರತ್ನಾಕರ್, ಎನ್. ರಮೇಶ್, ಇಸ್ಮಾಯಿಲ್ ಖಾನ್, ಎಸ್.ಪಿ. ದಿನೇಶ್, ಬಲದೇವ ಕೃಷ್ಣ, ಡಾ. ಶ್ರೀನಿವಾಸ್ ಕರಿಯಣ್ಣ, ಇಕ್ಕೇರಿ ರಮೇಶ್, ದೀಪಕ್ ಸಿಂಗ್, ಮಂಜುನಾಥ ಬಾಬು ಮೊದಲಾದವರು ಇದ್ದರು.