ಶಿವಮೊಗ್ಗ,
ಶರಾವತಿ ವಿದ್ಯುತ್ ಯೋಜನೆಯಿಂದ ನಿರಾಶ್ರಿತರಾಗಿ ಪ್ರಸಕ್ತ ಸುಮಾರು ೨೫ಸಾವಿರ ಕುಟುಂಬಗಳು ಬೀದಿಗೆ ಬರುವ ಮುನ್ನ ಡಬ್ಬಲ್ ಎಂಜಿನ್ನ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೊಂದವರ ಪರವಾಗಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮಾಜಿ ಶಾಸಕಿ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾರದಾ ಪೂರ್ಯಾನಾಯ್ಕ್ ಇಂದಿಲ್ಲಿ ಹೇಳಿದರು.

೧೯೫೯ರಿಂದ ೧೯೬೫ರವರೆಗೆ ಸುಮಾರು ೧೩ ಸಾವಿರ ಕುಟುಂಬದವರನ್ನು ಸಾಗರ, ಶಿವಮೊಗ್ಗ, ಹೊಸನಗರ, ಶಿಕಾರಿಪುರ ಭದ್ರಾವತಿ ತಾಲ್ಲೂಕಿನ ಕೆಲವು ಗ್ರಾಮಗಳ ಅರಣ್ಯ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸಿದ್ದು, ಅಂದಿನ ಸರ್ಕಾರ ತಂದುಬಿಟ್ಟಿದ್ದು, ಅವರನ್ನು ಕಾಪಾಡಲು ೨೦೧೭ರಲ್ಲಿ ಅಂದಿನ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಭೂಮಿಯ ಹಕ್ಕುಪತ್ರ ಕೊಡಲು ಅರಣ್ಯ ಇಲಾಖೆಯ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಅವರಿಂದ ವರದಿ ತಯಾರಿಸಿ ಕ್ರಮಕೈಗೊಂಡಿದ್ದರು ಎಂದು ಅವರು ಇಂದು ಮದ್ಯಾಹ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದಿಂದಾಗಿ ನಿರಾಶ್ರಿತರಿಗೆ ೧೩,೬೦೦ ಎಕರೆ ಡಿ.ನೋಟಿಫಿಕೇಷನ್ ಮಾಡಿದ್ದು, ೯೬೦೦ ಎಕರೆ ಭೂಮಿಯನ್ನು ಹಕ್ಕುಪತ್ರವಾಗಿ ನೀಡಲಾಗಿತ್ತು. ಪರಿಸರವಾದಿ ಹೆಸರಿನಲ್ಲಿ ನೊಂದವರ ಕಳಕಳಿಯಿಲ್ಲದೇ ಗಿರಿಶ್ ಆಚಾರ್ ಎಂಬುವವರು ರಾಜ್ಯ ಉಚ್ಛನ್ಯಾ ಯಾಲಯದಲ್ಲಿ ದಾವೆ ಹೂಡಿದ್ದರು. ಕಾಂಗ್ರೆಸ್ ಅವಧಿ ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೊಂದವರ ಪರ ಧ್ವನಿ ಎತ್ತದೆ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ಕೊಡ ದಿರುವುದರಿಂದ ನ್ಯಾಯಾಲಯ ಹಕ್ಕುಪತ್ರ ರದ್ದುಗೊಳಿಸುವಂತೆ ಆಗ್ರಹಿಸಿತ್ತು ಎಂದರು.
ಬರುವ ಸೋಮವಾರ ಕಾಂಗ್ರೆಸ್ ನಡೆಸುವ ಇಂತಹ ಹೋರಾಟದ ಬಗ್ಗೆ ಪ್ರಶ್ನಿಸಿದಾಗ ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡುತ್ತಿದೆ. ಅದಕ್ಕೆ ನನ್ನ ಪ್ರತಿಕ್ರಿಯೆ ಇಲ್ಲ. ಪಕ್ಷಾತೀತವಾಗಿ ಮಾಡಿದ್ದರೆ ನಾವು ಹೋಗುತ್ತಿದ್ದೆವು. ಅವರ ಹತ್ತಿರ ಹೋಗಿ ನಾವು ಬರುತ್ತೇವೆ ಎನ್ನಬೇಕಿತ್ತೇ. ನನ್ನ ಕ್ಷೇತ್ರದಲ್ಲಿರುವ ನೊಂದ ನಿರಾಶ್ರಿತರಿಗೆ ನ್ಯಾಯ ಕೊಡಲು ಕೇಳುತ್ತಿದ್ದೇನೆ. ಈ ವಿಷಯ ರಾಜಕೀಯ ಮಾಡುವುದಕ್ಕಲ್ಲ. ಅಂತಹ ಬೂಟಾಟಿಕೆ ರಾಜಕಾರಣ ನನಗೆ ಬೇಡ. ಇಲ್ಲಿ ನನ್ನ ಜನರಿಗೆ ನ್ಯಾಯ ಸಿಗಬೇಕು.
-ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಒಟ್ಟಾರೆ ಈ ಸಮಸ್ಯೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ನಿರ್ಲಕ್ಷ್ಯತನವೇ ಕಾರಣ. ನ್ಯಾಯಾಲಯದ ಆದೇಶವೇನಾದರೂ ಜಾರಿಗೊಂಡರೆ ಸುಮಾರು ೨೫ ಸಾವಿರ ಕುಟುಂಬಗಳು ಬೀದಿ ಪಾಲಾಗುತ್ತವೆ. ಕೂಡಲೇ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದಲ್ಲಿರುವಂತೆ ಕೇಂದ್ರ ಸರ್ಕಾರದ ಅನುಮತಿ ಪಡೆದು ಮದನ್ ಗೋಪಾಲ್ ಅವರ ವರದಿಯಂತೆ ಡಿ ನೋಟಿ ಫಿಕೇಶನ್ ಮಾಡಿಸಿ ನ್ಯಾಯಾವಾಗಿರುವ ಎಲ್ಲ ಮುಳುವಡೆ ಸಂತ್ರಸ್ಥರಿಗೆ ಹಕ್ಕು ಕೊಡಿಸಲು ಶಾರದಾ ಪೂರ್ಯಾನಾಯ್ಕ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸತೀಶ್, ಬಸವನಗೌಡ, ಸುರೇಶ್, ಸರೋಜಮ್ಮ, ಇನಾಯತ್, ಪ್ರದೀಪ್, ಸತೀಶ್ ಹಾಗೂ ಇತರರಿದ್ದರು.