ಶಿವಮೊಗ್ಗ: ವೈದ್ಯಕೀಯ ಕ್ಷೇತ್ರ ತುಂಬಾ ಮಹತ್ವದ ಹಾಗೂ ಜವಾಬ್ಧಾರಿಯುತ ವೃತ್ತಿಯಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಕೆಲವು ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಮುನ್ನ ಕಾನೂನು ನಿಯಮಗಳನ್ನು ಪಾಲಿಸುವುದು ಸೂಕ್ತ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣವರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತು, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ಯದಲ್ಲಿ ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್ ೨೦೨೨ರ ಅಂಗವಾಗಿ ಆಯೋಜಿಸಲಾಗಿದ್ದ ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಬರುವ ಕಾನೂನು ಬದ್ಧ ದತ್ತು ಪ್ರಕ್ರಿಯೆ ಹಾಗೂ ಕಾರಾ ಮಾರ್ಗಸೂಚಿಯ ಕುರಿತು ವೈದ್ಯಕೀಯ ವಿದ್ಯಾರ್ಥಿಗಳು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಇವರಿಗೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಪಘಾತ, ವ್ಯಾಜ್ಯಗಳು ನಡೆದ ಸಂದರ್ಭದಲ್ಲಿ ಗಾಯಾಳುವಾಗಿ ಚಿಕಿತ್ಸೆ ಪಡೆಯಲು ಬರುವ ವ್ಯಕ್ತಿಗಳ ವಿವರಣೆಯನ್ನು ಎಮ್‌ಎಲ್‌ಸಿ ರಿಜಿಸ್ಟರ್‌ನಲ್ಲಿ ದಾಖಲಿಸಿ ನಂತರ ಚಿಕಿತ್ಸೆ ನೀಡುವುದು ಒಳಿತು. ನಂತರ ಸಮೀಪದ ಠಾಣೆಯಲ್ಲಿ ಸಂಬಂಧಪಟ್ಟವರ ಬಗ್ಗೆ ಪ್ರಕರಣ ದಾಖಲಿಸುವುದರಿಂದ ವೈದ್ಯರು ಅನಾವಶ್ಯಕ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಬಹುದು.
ವಾಹನ ಅಪಘಾತವಾದ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿ ಕೆಲವು ಅನಧಿಕೃತ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸುವುದನ್ನು ತಡೆಗಟ್ಟಬಹುದು ಎಂದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿರುವುದು ಸುರಕ್ಷಿತ. ಕೆಲವು ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ ಮಗು ಹುಟ್ಟಿದ ತಕ್ಷಣ ನವಜಾತ ಶಿಶುವನ್ನು ಬೇರೆಯವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ದಿನನಿತ್ಯ ಕೇಳಿಬರುತ್ತಿವೆ. ಆದರೆ ಇದು ಕಾನುನಾತ್ಮಕ ಪ್ರಕ್ರಿಯೆಯಾಗಿರುವುದಿಲ್ಲ. ಅಲ್ಲದೆ ಮಕ್ಕಳನ್ನು ಮಾರಾಟ ಮಾಡಿದಂತಾಗುತ್ತದೆ. ಇದರಿಂದ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಎಲ್ಲರಿಗೂ ಶಿಕ್ಷೆ ಖಚಿತ. ವೈದ್ಯರು ಇಂತಹ ಚಟುವಟಿಕೆಗಳಿಗೆ ಪುಷ್ಟಿ ನೀಡಬಾರದು ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ. ರೇಖಾ ಮಾತನಾಡಿ, ಇಂದಿಗೂ ನಮ್ಮ ದೇಶದಲ್ಲಿ ಹೆಣ್ಣು ಮಗುವನ್ನು ಕಡೆಗಣಿಸಿ ಆಸ್ಪತ್ರೆಯಲ್ಲಿಯೇ ಬಿಟ್ಟು ಪ್ರಕರಣಗಳು ನಡೆಯುತ್ತಲೇ ಇದ್ದು, ಹೀಗೆ ಪೋಷಕರಿಂದ ತಿರಸ್ಕೃತವಾದ, ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುವ ಹಾಗೂ ವಿಶೇಷ ಚೇತನ ಮಕ್ಕಳಿಗೆ ನಮ್ಮ ಇಲಾಖೆಯಲ್ಲಿ ಆಶ್ರಯ ನೀಡಲಾಗುವುದು ಎಂದು ಹೇಳಿದರು.
ಪೋಷಕರಿಲ್ಲದ ಮಕ್ಕಳನ್ನು ವಾಪಸ್ ಕುಟುಂಬಕ್ಕೆ ಸೇರ್ಪಡೆಗೊಳಿಸಲು ಎಲ್ಲಾ ರೀತಿಯ ಕಾನೂನಾತ್ಮಕ ಪ್ರಯತ್ನ ಮಾಡಲಾಗುವುದು. ಮೊದಲನೆಯದಾಗಿ ಸ್ಪೆಷಲ್ ಅಡಾಪ್ಷನ್ ಏಜೆನ್ಸಿ ಮುಖಾಂತರ ಮಕ್ಕಳ ವಿವರಣೆ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು ಹಾಗೂ ಸಂಬಂಧಪಟ್ಟವರು ಸಂಪರ್ಕಿಸಲು ೬೦ ದಿನಗಳ ಕಾಲಾವಕಾಶ ನೀಡಲಾಗುವುದು. ನಂತರ ಸಿಡಬ್ಲ್ಯೂಸಿಯಲ್ಲಿ ದತ್ತು ಸ್ವೀಕಾರ ಪ್ರಕ್ರಿಯೆಗೆ ಕಾನೂನಾತ್ಮಕ ನೋಂದಣಿ ಮಾಡಿಸಿ, ಮಕ್ಕಳನ್ನು ಪೋಷಿಸುವ ಇಚ್ಚೆಯುಳ್ಳುವರಿಗೆ ದತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಲತಾ ನಾಗೇಂದ್ರ, ದಂತವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯ ಶ್ರೀನಿವಾಸ್, ಮೆಡಿಕಲ್ ಕಾಲೇಜಿನ ಸುಪರಿಂಟೆಂಡೆಂಟ್ ಶಿವಮೂರ್ತಿ, ಡಾ. ಅದಿತಿ ನಾಗೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸುರೇಶ್, ಉಪ ಪ್ರಾಂಶುಪಾಲರಾದ ಡಾ. ಎಸ್.ಎಮ್. ಸಿದ್ದಲಿಂಗಪ್ಪ, ಗಾಯಿತ್ರಿ, ಸಿಸ್ಟರ್ ಲಿಲ್ಲಿ ಪುಷ್ಟಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಾಯಿತ್ರಿ ಉಪಸ್ಥಿತರಿದ್ದರು.