ಶಿವಮೊಗ್ಗ: ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಬೇರೆ ಬೇರೆ ಪಕ್ಷಕ್ಕೆ ಹೋಗಿರುವವರು ವಾಪಸ್ ಪಕ್ಷಕ್ಕೆ ಡಿಕೆಶಿ ಆಹ್ವಾನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬನ್ನಿ ಎಂದು ಹೇಳುವ ಹಕ್ಕು ಅವರಿಗಿದೆ. ಅವರ ಪಕ್ಷಕ್ಕೆ ಹೋಗುವುದು, ಬಿಡುವ ಅಧಿಕಾರ ನಮಗಿದೆ ಎಂದರು.
ನಾವೆಲ್ಲಾ ಅಲ್ಲಿಂದ ಹೊರಗೆ ಬಂದಿದ್ದೇವೆ. ಮತ್ತೆ ಅಲ್ಲಿಗೆ ಹೋಗುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸೂರ್ಯ ಚಂದ್ರರು ಇರುವವರೆಗೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದಾರೆ. ನಾವೇನು ಅರ್ಜಿ ಹಾಕಿಲ್ಲ, ಅರ್ಜಿ ಹಾಕುವ ಅವಶ್ಯಕತೆಯೂ ನಮಗಿಲ್ಲ. ಈ ವಿಷಯದ ಬಗ್ಗೆ ಅವರು ಚರ್ಚೆ ಮಾಡಿಕೊಳ್ಳಲಿ. ನಾವು ಚರ್ಚೆ ಮಾಡಲ್ಲ. ನಾವು ಯಾರು ಮತ್ತೆ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇ.ಡಬ್ಲ್ಯೂ.ಎಸ್. ಮೀಸಲಾತಿ ಪರ ಸುಪ್ರೀಂ ತೀರ್ಪು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೋರ್ಟ್ ಆದೇಶ ಸ್ವಾಗತಿಸುತ್ತೇನೆ. ಶೇ.10ರಷ್ಟು ಮೇಲ್ವರ್ಗದಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಲು ಮುಂದಾಗಿತ್ತು. ಆದರೆ ಕೆಲವರು ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಹೋಗಿದ್ದರು. ಯಾವುದೇ ವರ್ಗದಲ್ಲಿರುವ ಬಡವನಿಗೆ ಬದುಕುವ ಹಕ್ಕಿದೆ. ಸುಪ್ರೀಂ ಕೋರ್ಟ್ ಇದನ್ನು ಸಮರ್ಥಿಸಿದೆ ಎಂದರು.
ಕರ್ನಾಟಕದಲ್ಲಿ ಈ ಮೀಸಲಾತಿ ಇನ್ನೂ ಜಾರಿಯಾಗಿಲ್ಲ. ಸುಪ್ರೀಂ ಆದೇಶ ಇಡೀ ದೇಶಕ್ಕೆ ಅನ್ವಯವಾಗುತ್ತೆ. ಅದೇ ರೀತಿ ಕರ್ನಾಟಕದಲ್ಲೂ ಅನುಷ್ಠಾನವಾಗಲಿದೆ ಎಂದು ಹೇಳಿದರು.