ಶಿವಮೊಗ್ಗ: ಆಧುನಿಕ ಯುಗದಲ್ಲಿ ಬದಲಾವಣೆ ಅನಿವಾರ್ಯ. ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ವತಿಯಿಂದ ಇಂದು ಹಮ್ಮಿಕೊಂಡಿದ್ದ ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.  

ನಮ್ಮ ದೇಶದಲ್ಲಿ ಮಾಹಿತಿ ಕೊರತೆ ಇದೆ. ಇದನ್ನು ಹೋಗಲಾಡಿಸುವ ಕೆಲಸ ಸಂಘ ಸಂಸ್ಥೆಗಳು ಮಾಡಬೇಕು. ನಮ್ಮ ಜವಾಬ್ದಾರಿಗಳು ಮತ್ತು ಕರ್ತವ್ಯ ಇರುತ್ತದೆ. 140 ಕೋಟಿ ಜನಸಂಖ್ಯೆಯುಳ್ಳ ದೊಡ್ಡ ದೇಶದಲ್ಲಿ ಎಲ್ಲವನ್ನೂ ಸರ್ಕಾರ ಮಾಡಲಾಗುವುದಿಲ್ಲ. ಸಹಕಾರ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಮೇಲೆ ನಿರ್ದೇಶಕರ ಮನೋಭಾವಗಳು ಬದಲಾಗುತ್ತವೆ ಎಂದರು.

ಅಹಂಕಾರ ಬಂದಾಗ ಸಂಸ್ಥೆಯ ಬೆಳವಣಿಗೆಯ ವೇಗ ಕಡಿಮೆಯಾಗುತ್ತದೆ. ಈಗಿನ ವಿದ್ಯಾರ್ಥಿಗಳಿಗೆ ಕೂಡ ಪಠ್ಯವನ್ನು ಬಿಟ್ಟು ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇಲ್ಲ. ಅದೇ ರೀತಿ ಪ್ರತಿದಿನವೂ ಹೊಸ ವಿಷಯಗಳನ್ನು ಅರಿತುಕೊಳ್ಳುವ ಇವತ್ತಿನ ಕಾಲಘಟ್ಟದಲ್ಲಿ ಕಾರ್ಯಾಗಾರಗಳು ಅತಿ ಅವಶ್ಯಕ ಎಂದರು.

ಕಾರ್ಯಾಗಾರಗಳು ಕಾಟಾಚಾರಕ್ಕೆ ಆಗಬಾರದು. ಬದಲಾವಣೆ ಬೇರೆ, ಅಭಿವೃದ್ಧಿ ಬೇರೆ. ಈ ಬಗ್ಗೆ ಅವಲೋಕನ ಆಗಬೇಕಾಗಿದೆ. ಕೆಲವು ಕಡೆ 75 ವರ್ಷಗಳ ಹಳೆಯ ಪದ್ಧತಿಯೇ ಜಾರಿಯಲ್ಲಿದೆ. ಎಲ್ಲವೂ ಡಿಜಿಟಲೈಸೇಷನ್ ಆಗುತ್ತಿರುವ ಈ ಸಂದರ್ಭದಲ್ಲಿ ನೂತನ ತಾಂತ್ರಿಕತೆ ಬಳಸಿಕೊಂಡು ಷೇರುದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸಹಾಯ ಮಾಡುವ ಜವಾಬ್ದಾರಿ ಎಲ್ಲಾ ಸಹಕಾರಿಗಳ ಮೇಲಿದ್ದು, ಬದಲಾವಣೆ ಅನಿವಾರ್ಯವಾಗಿದೆ. ಕೇಳುವಂತಹ ಮನೋಭಾವ ಬಳಸಿಕೊಳ್ಳಿ. ಕಲಿಯುವುದು ತುಂಬಾ ಇದೆ. ಕಾಲಕ್ಕೆ ತಕ್ಕ ಬದಲಾವಣೆಯ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಪತ್ತಿನ ಸಂಘಗಳ ಮಹಾಮಂಡಲದ ಉಪಾಧ್ಯಕ್ಷ ಕೆ.ಕೆ. ಮಹೇಂದ್ರಪ್ರಸಾದ್ ಗೌಡ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳ ಅಧ್ಯಕ್ಷ ಡಾ.ಬಿ.ಡಿ. ಭೂಕಾಂತ್, ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್, ವಿ.ರಾಜು, ನಾಗೇಶ್ ಡೋಂಗ್ರೆ, ರಾಮಕೃಷ್ಣ, ಜಿ. ಮಲ್ಲಿಕಾರ್ಜುನಯ್ಯ, ಡಿ.ಆರ್. ನಾಗೇಶಪ್ಪ, ಹೆಚ್.ಟಿ. ನಾಗೇಶ್, ಆಶಾಲತಾ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!