ಕಾಂತಾರ ಎಂಬ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಅದಕ್ಕಾಗಿ ಆ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ……
ಅದರ ಕಥೆ ಅಥವಾ ನಿರೂಪಣೆ ಅಥವಾ ಕೆಲವು ದೃಶ್ಯಗಳು ಅಥವಾ ಅಲ್ಲಿ ಪ್ರದರ್ಶಿಸಿದ ಕೆಲವು ಸಂಪ್ರದಾಯಗಳು ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ವಾಸ್ತವ ಏನು ?
ಸಿನಿಮಾ ಎಂಬುದು ಒಂದು ಪ್ರಬಲ ಕಲಾ ಮಾಧ್ಯಮ. ಸಾಹಿತ್ಯ ಸಂಗೀತ ನೃತ್ಯ ನಾಟಕ ಚಿತ್ರ ಕಲೆ ಹೀಗೆ ಎಲ್ಲವೂ ಕಲಾ ಪ್ರಕಾರಗಳು.
ಸಾಮಾನ್ಯ ಜನರ ಭಾವನೆಯಲ್ಲಿ ಸಿನಿಮಾ ಎಂಬುದು ಮನರಂಜನೆಯನ್ನೇ ಮುಖ್ಯವಾಗಿ, ಸಂದೇಶಗಳನ್ನು ನೆರಳಾಗಿ, ವ್ಯಾಪಾರವನ್ನು ಧ್ಯೇಯವಾಗಿ, ಪ್ರಶಸ್ತಿಯನ್ನು ಉದ್ದೇಶವಾಗಿ ಇಟ್ಟುಕೊಂಡು ನಿರ್ಮಿಸುವ ದೃಶ್ಯ ಮಾಧ್ಯಮ ಎಂದೇ ಪರಿಗಣಿಸಲಾಗಿದೆ.
ಯಾವುದೇ ಅಧೀಕೃತತೆ, ಖಚಿತತೆ, ಉತ್ತರದಾಯಿತ್ವ ಇಲ್ಲದೆ ನಿರ್ದೇಶಕನ ಕ್ರಿಯಾತ್ಮಕತೆಯ ಮೇಲೆಯೇ ಬಹುತೇಕ ಸಿನಿಮಾಗಳು ಸೃಷ್ಟಿಯಾಗುತ್ತವೆ. ಸಿನಿಮಾ ಅಧೀಕೃತ ಇತಿಹಾಸವಲ್ಲ. ಅದೊಂದು ಕಲ್ಪನಾ ಲೋಕ. ಕ್ರಿಯಾತ್ಮಕ ಚಿಂತನೆ ಮಾತ್ರ.
ಸಿನಿಮಾ ಕಥೆ ಕಾದಂಬರಿಗಳ ಮೂಲಗುಣ ಅದನ್ನು ರಚಿಸುವವರ ಭಾವನೆಯಂತೆಯೇ ಅದರ ಎಲ್ಲಾ ಪಾತ್ರಗಳನ್ನು ನಿಯಂತ್ರಿಸುತ್ತಾರೆ. ಸರಸ, ವಿರಸ, ಹೊಡೆದಾಟ,ಅಸೂಯೆ, ವಂಚನೆ, ವಿದ್ರೋಹ……
ಎಲ್ಲಾ ಘಟನೆಗಳು ಆತನದೇ ಸೃಷ್ಟಿ ಮತ್ತು ಪಾತ್ರಗಳು ಅವನು ಹೇಳಿದಂತೆಯೇ ಕೇಳುತ್ತವೆ.
ಇಂತಹ ಒಂದು ಮಾಧ್ಯಮ
ಅಶೋಕ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಶಿವಾಜಿ, ಸಚಿನ್ ತೆಂಡೂಲ್ಕರ್, ಮೇರಿಕೋಮ್, ವೀರಪ್ಪನ್, ಇಂದಿರಾಗಾಂಧಿ, ಮನಮೋಹನ್ ಸಿಂಗ್, ನರೇಂದ್ರ ಮೋದಿ…….. ಹೀಗೆ ಇತಿಹಾಸ ಮತ್ತು ವರ್ತಮಾನದ ಪಾತ್ರಗಳನ್ನು ಅದರ ಸಜಹ ರೂಪದಲ್ಲಿ ನಮ್ಮ ಮುಂದೆ ಇಡಲು ಸಾಧ್ಯವೇ……..
ಅದು ನಂಬಿಕೆಗೆ ಅರ್ಹವೇ…….
ಕನಿಷ್ಠ ಬರಹವಾದರೂ,
ಒಬ್ಬನೇ ತನ್ನ ಕಲ್ಪನೆಯಲ್ಲಿ – ಅಕ್ಷರಗಳ ಮೂಲಕ ಕಥೆ ನಿರೂಪಿಸಬಹುದು.
ಆದರೆ ಸಿನಿಮಾ ಒಂದು ಟೀಮ್ ವರ್ಕ್. ಇಲ್ಲಿ ಸಂಕಲನ ಸಂಗೀತ ಛಾಯಾಗ್ರಹಣ ವೇಷಭೂಷಣ ಪ್ರಸಾಧನ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಯಾರೋ ಒಬ್ಬ ವ್ಯಕ್ತಿ ಇನ್ನೊಬ್ಬರ ಪಾತ್ರವನ್ನು ನಿರ್ವಹಿಸಬೇಕು. ನಟನೆ ನೈಜವಾಗಿರಬಹುದು ಆದರೆ ಭಾವನೆಗಳು ಮತ್ತು ಮನಸ್ಥಿತಿ ಅರಿಯಲು ಆಗುತ್ತದೆಯೇ………….
ಇತಿಹಾಸಕ್ಕೆ ಸಿನಿಮಾ ಮಾಡಬಹುದಾದ ಬಹುದೊಡ್ಡ ಮೋಸ ಇದೆ.
ಸಂಗೊಳ್ಳಿ ರಾಯಣ್ಣ ಗಲ್ಲಿಗೇರುವಾಗ ಅಷ್ಟೊಂದು ಸಂತೋಷದಿಂದ ಪ್ರೆಶ್ ಆಗಿ ಉದ್ದುದ್ದ ಮಾತುಗಳನ್ನು ಆಡಿ ನೇಣುಗಂಭಕ್ಕೆ ಏರಿದ್ದಾನೆ ಎಂದು ತೋರಿಸಲಾಗುತ್ತದೆ. ಅದು ಸಾಧ್ಯವೇ. ಆತನ ಮನಸ್ಸಿನ ವ್ಯಥೆ, ತುಮಲ ನೋವು ಅಸಹಾಯತೆ ಆಕ್ರೋಶ ಧೈರ್ಯ ಎಲ್ಲವೂ ಆತನಿಗಷ್ಟೇ ಗೊತ್ತಿರುತ್ತದೆ. ಗಲ್ಲಿಗೇರಿದ್ದು ಮಾತ್ರ ಸತ್ಯ. ಉಳಿದದ್ದು ಊಹೆ ಮಾತ್ರ.
ನಿಜ ಜೀವನದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಮತ್ತು ಅದರ ದೃಶ್ಯಗಳು – ಆ ವ್ಯಕ್ತಿಗಳು ನಮ್ಮ ನಡುವೆಯೇ ಇರುವಾಗ, ಧೋನಿ ಮೇರಿಕೋಮ್ ಮಿಲ್ಖಾಸಿಂಗ್ ಮುಂತಾದವರ ಸಿನಿಮಾಗಳು ಹೇಳಲು ಏನು ಉಳಿದಿದೆ. ಹಾಡು ಹೊಡೆದಾಟ ಸೆಂಟಿಮೆಂಟ್ ಗಳು ಭಾವನೆಗಳನ್ನು ಮಾತ್ರ ಕೆರಳಿಸುತ್ತವೆ ಅಷ್ಟೆ.
ಕಾಂತಾರ ಸಹ ನಿರ್ದೇಶಕನ ಒಂದು ದೃಷ್ಟಿಕೋನ ಮತ್ತು ಮನರಂಜನೆಯ ಉದ್ದೇಶದ ಸಿನಿಮಾ ಮಾತ್ರ. ಅದನ್ನು ಗಂಭೀರವಾಗಿ ಪರಿಗಣಿಸಿ ಅಲ್ಲಿನ ಘಟನೆಗಳ ಆಧಾರದ ಮೇಲೆ ಚರ್ಚೆ ಹಾಸ್ಯಾಸ್ಪದ. ಸಿನಿಮಾ ಬಗ್ಗೆ ವಿಮರ್ಶೆ ಮಾಡಬಹುದು ಜೊತೆಗೆ ಅಲ್ಲಿ ಪ್ರಸ್ತಾಪಿಸಿದ ವಿಷಯಗಳ ಕುರಿತು ಐತಿಹಾಸಿಕ ಮತ್ತು ಪೌರಾಣಿಕ ಆಧ್ಯಯನ ಮಾಡಬಹುದು. ಆದರೆ ಸಿನಿಮಾದ ಹಿನ್ನೆಲೆಯಲ್ಲಿ ಅಲ್ಲ.
ಈ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ವಿವೇಚನೆಯೇ ಇಲ್ಲ. ವಿವಾದಗಳನ್ನು ಹುಟ್ಟುಹಾಕಿ ಜನರ ನಡುವೆ ಬೆಂಕಿ ಹಚ್ಚಿ ಅದರಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವ ಹುನ್ನಾರ ಅಥವಾ ಕುತಂತ್ರ. ಒಬ್ಬ ಸಿನಿಮಾ ನಿರ್ದೇಶಕನನ್ನು ಅದರ ಬಿಡುಗಡೆಯ ಸಮಯದಲ್ಲಿ ರಾಜಕೀಯ ಪ್ರಶ್ನೆ ಕೇಳುವ ಅವಶ್ಯಕತೆಯೇ ಇಲ್ಲ. ಅದಕ್ಕೆ ಬೇರೆ ಸಮಯವಿದೆ. ಹಾಗೆಯೇ ಸಿನಿಮಾದ ಕಾಲ್ಪನಿಕ ಕಥೆಯ ಬಗ್ಗೆ ಗಂಭೀರ ಚರ್ಚೆಯೂ ಬೇಕಾಗಿಲ್ಲ.
ಅದು ಇತಿಹಾಸದ ಬೆಳಕಿನಲ್ಲಿ, ವಾಸ್ತವದ ಹಿನ್ನೆಲೆಯಲ್ಲಿ, ಸಂಸ್ಕೃತಿಗಳ ಸಮಗ್ರ ಚಿಂತನೆಯಲ್ಲಿ ಮೂಡಿ ಬರಬೇಕಾದ ವಿಷಯ. ಭೂತಾರಾಧನೆ, ದೈವ ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು ಸಿನಿಮಾದ ಮನರಂಜನೆ – ಕ್ರಿಯಾತ್ಮಕತೆ – ಕಾಲ್ಪನಿಕ ಲೋಕ ಮೀರಿದ ಗಂಭೀರವಾದ ಅಧ್ಯಯನ ಬಯಸುವ ವಿಷಯಗಳು.
ಕಥೆ ಕಾದಂಬರಿ ಸಿನಿಮಾ ಸೃಷ್ಟಿಸುವ ಕ್ರಿಯಾತ್ಮಕ ವ್ಯಕ್ತಿಗಳ ಸ್ವಾತಂತ್ರ್ಯ ಗೌರವಿಸೋಣ. ಅದಕ್ಕೆ ಯಾವುದೇ ನಿಯಂತ್ರಣ ಬೇಡ.
ಆದರೆ ನಾವುಗಳು ಆ ಮಾಧ್ಯಮವನ್ನು ಅದು ಹೇಗಿದೆಯೋ ಹಾಗೆಯೇ ಅಂದರೆ ಅಮಿತಾಭ್, ರಜನಿಕಾಂತ್ ಸಲ್ಮಾನ್ ಖಾನ್, ಚಿರಂಜೀವಿ, ದರ್ಶನ್, ಮಮ್ಮುಟ್ಟಿ ಮುಂತಾದವರು ಮತ್ತು ಅವರಂತೆ ಅತಿರಂಜಿತವಾಗಿ ಮನರಂಜನೆಯ ದೃಷ್ಟಿಯಿಂದ ನೋಡಬೇಕೆ ಹೊರತು ವಾಸ್ತವದಲ್ಲಿ ಇದೇ ಇತಿಹಾಸ ಎಂದು ತಿಳಿಯಬಾರದು. ಆ ಮಟ್ಟದ ಪ್ರಬುದ್ದತೆ ನಮ್ಮ ಜನಗಳಲ್ಲಿ ಮೂಡಲಿ ಅದು ಸಮಾಜದ ಅಭಿವೃದ್ಧಿ ಪೂರಕ ಎಂದು ಆಶಿಸುತ್ತಾ………
ನ್ಯಾಯದ ದಂಡ ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಗಳಿಗೂ ಏಕ ರೀತಿಯಲ್ಲಿ ಇರಲಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……