: ಸುಮಾರು ಗಣಪತಿ ಕೆರೆಯನ್ನು 5.50 ಕೋಟಿ ರೂ. ವೆಚ್ಚದಲ್ಲಿ ಗಣಪತಿ ಕೆರೆ ಅಭಿವೃದ್ದಿ ಮಾಡಲಾಗುತ್ತಿದೆ. ಈಗಾಗಲೆ ನಮ್ಮ ಬಳಿ ೬.೫೦ ಕೋಟಿ ರೂಪಾಯಿ ಅನುದಾನವಿದ್ದು, ಮುಂದಿನ ವಾರ ಇನ್ನು ಒಂದು ಕೋಟಿ ರೂ. ಅನುದಾನ ತರುವ ಪ್ರಯತ್ನ ನಡೆಸಲಾಗುತ್ತದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಗಣಪತಿ ಕೆರೆ ದಡದಲ್ಲಿ ಶುಕ್ರವಾರ ನಗರಸಭೆಯ ೫೦ ಲಕ್ಷ ರೂಪಾಯಿ ಅನುದಾನದಲ್ಲಿ ಕೆರೆದಂಡೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡುತ್ತಾ, ಪ್ರವಾಸೋದ್ಯಮ ಇಲಾಖೆಯಿಂದ ಕೆರೆ ಅಭಿವೃದ್ದಿಗೆ ೬ ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ಕೆರೆ ಸುತ್ತಲೂ ವಾಕಿಂಗ್ ಪಾಥ್, ಲೈಟಿಂಗ್ಸ್, ಸಂಗೀತ ಹೊರಹೊಮ್ಮುವುದೂ ಸೇರಿದಂತೆ ಅಂತರ್ಜಲ ಉಳಿಸಿಕೊಂಡು ಹೋಗುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಮೊದಲು ಗಣಪತಿ ಕೆರೆ ೨೪.೩೫ ಎಕರೆ ಇತ್ತು. ಇದೀಗ ಅಕ್ಕಪಕ್ಕದ ಒತ್ತುವರಿ ತೆರವುಗೊಳಿಸಿದ್ದು ಕೆರೆ ವಿಸ್ತೀರ್ಣ ಸುಮಾರು ೩೦ ಎಕರೆಯಷ್ಟಿದೆ. ಪೂರ್ಣ ಕೆರೆಯನ್ನು ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಹೇಳಿದರು.
ನಗರವನ್ನು ಸಂಪರ್ಕಿಸುವ ಐದೂ ಭಾಗದಲ್ಲೂ ದ್ವಿಪಥ ಮತ್ತು ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು,
ಈಗಾಗಲೆ ಬಿ.ಎಚ್.ರಸ್ತೆ ಅಗಲೀಕರಣ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಶಿವಮೊಗ್ಗ ಹೊರತುಪಡಿಸಿದರೆ ಸಾಗರ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ನಗರಕ್ಕೆ ಸಮೀಪದ ತ್ಯಾಗರ್ತಿ ವೃತ್ತದಿಂದ ಇಕ್ಕೇರಿ, ಬಿ.ಎಚ್.ರಸ್ತೆಯಿಂದ ಕೌತಿ, ಇಕ್ಕೇರಿಯಿಂದ ಕುಗ್ವೆವರೆಗೆ ಬೈಪಾಸ್ ರಸ್ತೆ ನಿರ್ಮಿಸುವ ಪ್ರಯತ್ನ
ನಡೆದಿದ್ದು, ಶೀಘ್ರದಲ್ಲಿಯೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದರು.
ಸಾಗರವನ್ನು ಶಿಸ್ತುಬದ್ದವಾಗಿ ನಿರ್ಮಿಸುವ ನಿಟ್ಟಿನಲ್ಲಿ ಯೋಜನಾ ಪ್ರಾಧಿಕಾರವನ್ನು ರಚನೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೆ ಯೋಜನಾ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲಾಗಿದೆ. ಇದರ ಜೊತೆಗೆ ರೈತರ ಸಮಸ್ಯೆಗೂ ಸರ್ಕಾರ ಸ್ಪಂದಿಸಿದ್ದು, ಭೂಕಬಳಿಕೆ ಪ್ರಕರಣದಲ್ಲಿ ರೈತರು ಬೆಂಗಳೂರಿನ ವಿಶೇಷ ಭೂಕಬಳಿಕೆ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಲಾಗಿದೆ ಎಂದು ತಿಳಿಸಿದರು.