ಮನೆಯಲ್ಲಿ ತಾಯಿ ಹೇಗೆ ಬೇಸರವಿಲ್ಲದೆ ಎಲ್ಲ ರೀತಿಯ ಸ್ವಚ್ಚತೆ ಕಾರ್ಯ ಕೈಗೊಳ್ಳುವಳೋ ಅದೇ ರೀತಿಯಲ್ಲಿ ಎಲ್ಲ ರೀತಿಯ ಸ್ವಚ್ಚತೆಯನ್ನು ಕೈಗೊಳ್ಳುವ ತಾಯಿ ರೂಪದ ಜನ ಪೌರ ಕಾರ್ಮಿಕರು ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ಪೌರಕಾರ್ಮಿಕರನ್ನು ಕೊಂಡಾಡಿದರು.
ಮಹಾನಗರಪಾಲಿಕೆ ವತಿಯಿಂದ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆಯಲ್ಲಿ ತಾಯಿ ಹೇಗೆ ಸ್ವಚ್ಚತೆ ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ಬೇಸರವಿಲ್ಲದೆ ಮಾಡುತ್ತಾಳೋ ಅದೇ ರೀತಿ ಪೌರಕಾರ್ಮಿಕರು ಯಾವುದೇ ಬೇಸರವಿಸಲ್ಲದೆ ನಗರ, ಊರುಗಳಲ್ಲಿನ ಎಲ್ಲ ರೀತಿಯ ಕಸ, ಕೊಳೆಗಳನ್ನು ಸ್ವಚ್ಚಗೊಳಿಸುತ್ತಾರೆ. ಬೇಡಿಕೆ ಹಲವಾರು ಇದ್ದರೂ, ಈಡೇರದಿದ್ದರೂ ತಮ್ಮ ಕಾಯಕವನ್ನು ಬಿಡದೇ ಮುಂದುವರೆಸಿಕೊಂಡು ಹೋಗುವ ತಾಯಿಯಂತಹ
ಜನ ನೀವು ಎಂದ ಅವರು ನಾವು ಎಂದಿಗೂ ಪೌರಕಾರ್ಮಿಕರನ್ನು ತಾತ್ಸಾರ ಮಾಡುವಂತಿಲ್ಲ. ನಾವೆಲ್ಲ ಒಂದೇ, ಸಮಾಜ ಶುದ್ದಿ ಮಾಡುವ ಕೆಲಸವನ್ನು ಎಲ್ಲ ಸೇರಿ ಮಾಡೋಣ ಎಂದರು.
ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 6 ಎಕರೆ 9 ಗುಂಟೆ ಜಮೀನಿನಲ್ಲಿ ಒಟ್ಟು 168 ಮನೆಗಳ ನಿರ್ಮಾಣ ಆಗುತ್ತಿದೆ. ಈ ಜಾಗ ಪಡೆಯಲು ಪೌರಕಾರ್ಮಿಕರು ಬಹಳ ಶ್ರಮಪಟ್ಟಿದ್ದಾರೆ. ಶೇ.60 ರಷ್ಟು ಕೆಲಸ ಆಗಿದೆ. ಒಂದು ಮನೆಗೆ ರೂ.8.25 ಲಕ್ಷ ವೆಚ್ಚ ತಗುಲುತ್ತದೆ. ಅದರಲ್ಲಿ ಫಲಾನುಭವಿ ತಲಾ ರೂ.1.5 ಲಕ್ಷ ನೀಡಬೇಕು. ಆದರೆ ಇದುವರೆಗೆ ಯಾರೂ ಹಣ ಕಟ್ಟಿಲ್ಲ. ಈ ಹಣವನ್ನು ಸಹ ಪಾಲಿಕೆಯ 24.10 ಅನುದಾನದಲ್ಲಿ ಭರಿಸಬಹುದೆಂದು ತಿಳಿಸಿದ್ದೀರಿ. ಈ ರೀತಿ ಹಣ ಭರಿಸಿ ಸಂಪೂರ್ಣವಾಗಿ ತಮಗೆ ಉಚಿತವಾಗಿ ಮನೆಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.