ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ತಲೆ ಎತ್ತಿವೆ ಎನ್ನುವುದಕ್ಕೆ ಈಗ ಸಾಕ್ಷಿ ಸಿಕ್ಕಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪದೇ ಪದೇ ಜಿಲ್ಲೆಯಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ತಲೆ ಎತ್ತುತ್ತಿವೆ ಎಂದು ಆರೋಪ ಮಾಡುತ್ತಲೇ ಬಂದಿತ್ತು. ಹಾಗೆಯೇ ಜಿಲ್ಲಾ ಕೇಂದ್ರದಲ್ಲಿ ಕೋಮುಗಲಭೆ, ಹಿಂಸಾತ್ಮಕ ಕೃತ್ಯಗಳು, ಶಾಂತಿಗೆ ಭಂಗ ತರುವಂತಹ ಘಟನೆಗಳು ನಡೆಯುತ್ತಲೇ ಇದ್ದವು. ಇದೀಗ ಐಸಿಸ್ ಜೊತೆ ಶಿವಮೊಗ್ಗದ ರಾಷ್ಟ್ರ ವಿರೋಧಿ ಶಕ್ತಿಗಳು ಕೈಗೂಡಿಸಿರುವುದು ನಿಜವಾಗಿದೆ ಎಂದರು.
ರಾಷ್ಟ್ರೀಯ ತನಿಖಾ ದಳ ಈಗಾಗಲೇ ಮೂವರನ್ನು ಬಂಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳು ಸಿಕ್ಕಿವೆ. ಘಟನೆ ನಡೆದ ಮೇಲೆ ಪೊಲೀಸರು ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಪೊಲೀಸರಿಗೆ, ರಾಜ್ಯ ಸರ್ಕಾರಕ್ಕೆ ಹಾಗೂ ಗೃಹ ಮಂತ್ರಿಗಳಿಗೆ ಜಿಲ್ಲಾ ಬಿಜೆಪಿಯಿಂದ ಅಭಿನಂದನೆಗಳು ಎಂದರು.
ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಲಿನ ‘ನಮೋ ವೇದಿಕೆ’ ಬಳಗದಿಂದ ಕಾರ್ಯಕ್ರಮ ಮಾಡಿ ಸ್ಥಳೀಯ ಶಾಸಕರ ವಿರುದ್ಧ ಮಾತನಾಡಿದ್ದು, ಇದು ಸರಿಯಲ್ಲ. ಈಗಾಗಲೇ ಸೊರಬದ ಮಂಡಲದಿಂದ ವರದಿ ತರಿಸಿಕೊಂಡಿದ್ದೇವೆ. ಮತ್ತು ಸೂಕ್ತ ಕ್ರಮಕ್ಕೆ ವರಿಷ್ಠರಿಗೆ ಸೂಚಿಸಿದ್ದೇವೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಎಂದರು.
ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲರಿಗೂ ತಾವು ಆಕಾಂಕ್ಷಿಗಳು ಎಂದು ಹೇಳುವ ಮುಕ್ತ ಅವಕಾಶವಿದೆ. ಆದರೆ, ಇದು ಪಕ್ಷದ ಚೌಕಟ್ಟಿನಲ್ಲಿಯೇ ಆಗಬೇಕು. ಅದನ್ನು ಬಿಟ್ಟು ಪತ್ರಿಕಾ ಹೇಳಿಕೆ ನೀಡುವುದು, ಪಕ್ಷದ ಹೆಸರಿನಲ್ಲಿ ವೇದಿಕೆ ಕಾರ್ಯಕ್ರಮ ಮಾಡುವುದು ಸರಿಯಲ್ಲ. ಇದಕ್ಕೆ ಮಾನ್ಯತೆ ಇಲ್ಲ. ಇದನ್ನು ಅಶಿಸ್ತು ಎಂದು ಪರಿಗಣಿಸಲಾಗುವುದು ಎಂದರು.
ಪ್ರಧಾನಿ ಮೋದಿ ಅವರು ಪೌರ ಕಾರ್ಮಿಕರ ಪಾದಪೂಜೆ ಮಾಡಿ ಜಗತ್ತಿಗೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ಅವರ ಮಹತ್ವವನ್ನು ಸಾರಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಸುಮಾರು 45 ಸಾವಿರ ಪೌರ ಕಾರ್ಮಿಕರನ್ನು ಹಂತ ಹಂತವಾಗಿ ಕಾಯಂ ಮಾಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ. ಮೊದಲ ಹಂತವಾಗಿ 11 ಸಾವಿರಕ್ಕೂ ಅಧಿಕ ಜನರನ್ನು ಕಾಯಂಗೊಳಿಸಲಾಗುವುದು. ನಂತರ ಎಲ್ಲಾ ರೀತಿಯ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು. ಇದೊಂದು ಮಹತ್ವದ ನಿರ್ಧಾರವಾಗಿದೆ. ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಎಂದರು.
ರಾಷ್ಟ್ರದಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಡಳಿತ ಸುಧಾರಣೆಯಾಗಿದೆ. ಆರ್ಥಿಕ ಸ್ಥಿರತೆ ಇದೆ. ರಾಜ್ಯದಲ್ಲಿಯೂ ಅಭಿವೃದ್ಧಿ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿಯೂ ಸಾಕಷ್ಟು ಕೆಲಸಗಳಾಗಿವೆ. ಈ ಹಿನ್ನಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿಯೂ ಕೂಡ 7 ಕ್ಕೆ 7 ಸ್ಥಾನಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಕೆ. ಸಿದ್ಧರಾಮಣ್ಣ, ಗಿರೀಶ್ ಪಟೇಲ್, ಬಿ.ಕೆ. ಶ್ರೀನಾಥ್, ಶಿವರಾಜ್, ಬಿ.ಆರ್. ಮಧುಸೂದನ್, ಗೀತಾ, ಜ್ಞಾನೇಶ್ವರ್, ಹೃಷಿಕೇಶ್ ಪೈ, ರಾಮು, ಕೆ.ವಿ. ಅಣ್ಣಪ್ಪ ಇದ್ದರು.