ಶಿವಮೊಗ್ಗ: ಪಕ್ಷದ ಬಲವರ್ಧನೆಗೆ ಮಹಿಳಾ ಕಾರ್ಯಕರ್ತೆಯರ ಕೊಡುಗೆ ಅನನ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.ಗೌರಿ ಹಬ್ಬದ ಪ್ರಯುಕ್ತ ಭಾನುವಾರ ಪಕ್ಷದ ಕಚೇರಿಯಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಅವರು ಬಾಗಿನ ನೀಡಿ ಮಾತನಾಡಿದರು.
ಸಮನ್ವಯ, ಸಹೋದರತೆಯ ಸಂಕೇತವೇ ಬಾಗಿನವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಬಾಗಿನ ನೀಡುತ್ತಾ ಬಂದಿರುವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಮಟ್ಟದಲ್ಲಿ ಬಾಗಿನ ನೀಡುವೆ ಎಂದರು.ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ. ಇದಕ್ಕಾಗಿ ನಾವೆಲ್ಲರೂ ಶ್ರಮಿಸೋಣ. ವಿಶೇಷವಾಗಿ ಮಹಿಳಾ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು. ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಮಾತನಾಡಿ, ಮಹಿಳೆಯರಿಗೆ ತವರು ಎಂದರೆ ಪ್ರೀತಿ, ಬಾಗಿನ ಸಂಬಂಧಗಳನ್ನು ಬೆಸೆಯುತ್ತೆ ಎಂದರು.ವಾರ್ಡ್ ಅಧಕ್ಷೆ ನಾಜೀಮ ಮಾತನಾಡಿ,
ಬಾಗಿನ ಎನ್ನುವುದು ಮಹಿಳೆಯರ ಹಕ್ಕು ಕೂಡ. ಮುಸ್ಲಿಂ ರಾದ ನಮಗೆ ಹಿಂದೂ ಸಂಪ್ರದಾಯದಂತೆ ಬಾಗಿನ ನೀಡಿರುವುದು ನಮ್ಮ ಪುಣ್ಯ ಎಂದರು.ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ಬಾಗಿನ ನೀಡುವ ಹೊಣೆ ಹೊತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷವೇ ನಮ್ಮ ತವರು ಮನೆಯಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಬಾಗಿನದ ಕೃತಜ್ಞತೆಯನ್ನು ಹೇಳೋಣ ಎಂದರು.ಕಾಂಗ್ರೆಸ್ ಮುಖಂಡೆ ವಿಜಯಲಕ್ಷ್ಮಿ ಪಾಟೀಲ್ ಮಾತನಾಡಿ, ಬಾಗಿನ ನೀಡಿದ ಎಲ್ಲರಿಗೂ ಕೃತಜ್ಞತೆಗಳು
ಎಂದರು. ಕಾರ್ಯಕ್ರಮದಲ್ಲಿ ಪ್ರೇಮ ಶೆಟ್ಟಿ, ಶಮಿನಾ ಬಾನು, ತಬಸುಮ್, ಮೀನಾಕ್ಷಿ, ಕವಿತಾ, ಸಂಧ್ಯಾ, ಸುಮಾ, ರೇಷ್ಮಾ, ಶೀಲಾ, ಸುಕನ್ಯಾ, ಮೇರಿ ಆಶಾ, ರೇಖಾ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಬಾಗಿನ ಸ್ವೀಕರಿಸಿದರು. ಅಧ್ಯಕ್ಷ ಸುಂದರೇಶ್ ಎಲ್ಲರಿಗೂ ಬಾಗಿನ ನೀಡಿ ಹರಸಿದರು.