ಶಿವಮೊಗ್ಗ,
ಪ್ರತಿ ೩ ವರ್ಷಕೊಮ್ಮೆ ಚುನಾವಣೆ ನಡೆಸುವುದು, ಸದಸ್ಯರ ಸಂಖ್ಯೆ ಹೆಚ್ಚಳ, ಪಾರದರ್ಶಕ ಆಡಳಿತ ಸೇರಿದಂತೆ ಹಲವಾರು ಆಶ್ವಾಸನೆಗಳನ್ನು ಚುನಾವಣೆ ಸಂದರ್ಭದಲ್ಲಿ ನಮ್ಮ ತಂಡ ನೀಡಿದ್ದು, ಈಡೇರಿಸಲಾಗು ವುದು ಎಂದು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಎಸ್. ಜ್ಯೋತಿ ಪ್ರಕಾಶ್ ಇಂದಿಲ್ಲಿ ತಿಳಿಸಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಆ.೨೧ರಂದು ನಡೆದ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಮ್ಮ ತಂಡದ ೮ ಸದಸ್ಯರು ಆಯ್ಕೆಯಾಗಿದ್ದು, ಇನ್ನೊಬ್ಬರ ಆಯ್ಕೆಯು ಕಾನೂನು ತೊಡಕಿನಿಂದ ಇಬ್ಬರು ಒಂದೂವರೆ ವರ್ಷ ಹಂಚಿಕೊಳ್ಳಲಾಗಿದೆ ಎಂದರು.
ನಮ್ಮ ಎದುರಾಳಿ ತಂಡದ ೭ಸದಸ್ಯರು ಆಯ್ಕೆಯಾಗಿರುವುದಕ್ಕೆ ಅವರಿಗೆ ಅಭಿನಂದಿಸುತ್ತೇನೆ. ಈ ತಂಡದ ಸಂಪೂರ್ಣ ಸಹಕಾರ ಪಡೆದು ಉತ್ತಮ ಆಡಳಿತ ನೀಡುತ್ತೇವೆ. ನಗರದ ಪ್ರತಿ ಬಡಾವಣೆಯಲ್ಲಿ ಉಪನ್ಯಾಸ, ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು. ರಾಮಣ್ಣ ಶ್ರೇಷ್ಠಿಪಾರ್ಕ್ ಪಕ್ಕದಲ್ಲಿರುವ ಸಮಾಜಕ್ಕೆ ಸೇರಿದ ಗದ್ದುಗೆಯನ್ನು ಅಭಿವೃದ್ಧಿಪಡಿಸು ವುದರ ಜೊತೆಗೆ ಅಲ್ಲಿ ಪುರೋಹಿತರ ಅವಶ್ಯಕತೆ ಇರುವುದರಿಂದ ಸಂಸ್ಕೃತ ಪಾಠಶಾಲೆ ಆರಂಭಿಸುವ ಉದ್ದೇಶವಿದೆ ಎಂದರು.
ಸಮಾಜದ ಪ್ರತಿಭಾವಂತ ಒಂದು ಸಾವಿರ ಮಕ್ಕಳಿಗೆ ಪುರಸ್ಕರಿಸುವುದು, ಐಎಎಸ್, ಕೆಎಎಸ್ ಪರೀಕ್ಷೆ ಬರೆಯಲಿಚ್ಛಿಸುವ ಸುಮಾರು ೨೫-೫೦ ಅರ್ಹ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ದತ್ತು ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸುವುದು, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಮಾಜದ ನಂಬಿಕೆ, ವಿಶ್ವಾಸಕ್ಕೆ ಚುತಿ ಬಾರದಂತೆ ನೂತನ ಮಂಡಳಿಯು ನಡೆದುಕೊಳ್ಳುತ್ತದೆ. ಸ್ಪರ್ಧಿಸಿ ಸೋತ ಅಭ್ಯರ್ಥಿಗಳ ಸಭೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೆದ್ದ ಅಭ್ಯರ್ಥಿಗಳಾದ ಎನ್.ಜೆ. ರಾಜಶೇಖರ್, ಟಿ.ಬಿ. ಜಗದೀಶ್, ಕೆ.ಎಸ್. ತಾರಾನಾಥ್, ಬಳ್ಳೆಕೆರೆ ಸಂತೋಷ್, ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ಮೋಹನ್ ಕುಮಾರ್ ಎಂ. ಬಾಳೆಕಾಯಿ, ಕೆ.ಸಿ.ನಾಗರಾಜ್, ಆನಂದ್ ಪಿ.ವಾಲಿ, ಎಂ.ಎನ್.ಒಡೆಯರ್ ಇದ್ದರು.