ಶಿಕಾರಿಪುರ,
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಿದ್ದರಾಮೋತ್ಸವವು ಡಿ.ಕೆ.ಶಿವಕುಮಾರ್ ಅವರ ಮೇಕೆದಾಟು ಪಾದಯಾತ್ರೆಗೆ ಪ್ರತ್ಯುತ್ತರವಾಗಿರ ಬಹುದು’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಕಾಂಗ್ರೆ ಸ್ನಲ್ಲಿ ಹಗ್ಗಜಗ್ಗಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ತಮ್ಮ ನಾಯಕತ್ವ ಪರೀಕ್ಷೆ ಮಾಡಿಕೊಳ್ಳಲು ಮೇಕೆದಾಟು ಪಾದಯಾತ್ರೆ ಮಾಡಿದರು. ಸಹಜ ವಾಗಿಯೇ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ನಡೆಸುವ ಮೂಲಕ ಮೇಕೆದಾಟು ಪಾದಯಾತ್ರೆಗೆ ಪ್ರತ್ಯುತ್ತರ ನೀಡಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಕಾಂಗ್ರೆಸ್ ಆಂತರಿಕ ಕಲಹದಲ್ಲಿ ಬಿಜೆಪಿ ತಲೆ ಹಾಕುವುದಿಲ್ಲ’ ಎಂದು ಹೇಳಿದರು.
’ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದಲೇ ನಾನು ಸ್ಪರ್ಧಿಸಬೇಕೆ ಎಂಬ ಪಕ್ಷ ನಿರ್ಧಾರ ಕೈಗೊಳ್ಳಲಿದೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
’ತಾಲ್ಲೂಕಿನ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಅವರು ’ವಿಜಯೇಂದ್ರ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾನೆ’ ಎಂದು ಘೋಷಿಸಿದ್ದರು. ಆದರೆ, ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಈ ಕ್ಷೇತ್ರದ ಅಭ್ಯರ್ಥಿಯಾಗಲು ನಾನು ಇಲ್ಲಿ ಪ್ರವಾಸ ಮಾಡುತ್ತಿಲ್ಲ. ಶಿಕಾರಿಪುರ ಕ್ಷೇತ್ರ ನನಗೆ ಹೊಸದಲ್ಲ
. ಹಿಂದೆಯೂ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡುತ್ತಿದ್ದೇನೆ’ ಎಂದು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.