ಶಿವಮೊಗ್ಗ,ಆ.29:
ಬರುವ ಸೆಪ್ಟಂಬರ್ ಐದರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಗೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿರುವುದು ಸ್ವಾಗತಾರ್ಹ ಸಂಗತಿ. ಇಲ್ಲಿ ಪ್ರತಿಭಾನ್ವಿತ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿರುವುದನ್ನು ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಭಿನಂಧಿಸಿದೆ.
ಎಂದಿನಂತೆ ಈ ಬಾರಿಯೂ ಸಹ ಪ್ರಶಸ್ತಿ ಘೋಷಿಸಲು ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಗಳನ್ನು ಈ ನಿಟ್ಟಿನಲ್ಲಿ ಗುರುತಿಸುವ ಕಾರ್ಯವನ್ನು ಶಿವಮೊಗ್ಗದ ಶಿಕ್ಷಣ ಇಲಾಖೆ ಮಾಡುತ್ತಿರುವುದು ಕಂಡುಬಂದಿದೆ. ಈಗಲಾದರೂ ಈ ವರ್ಷದಿಂದ ಅನುದಾನರಹಿತ ಶಿಕ್ಷಕರನ್ನೂ ಸಹ ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕೆಂದು ಸಂಘದ ಪರವಾಗಿ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಅನುದಾನರಹಿತ ಶಾಲೆಗಳ ಫಲಿತಾಂಶಕ್ಕೆ ಹೋಲಿಕೆ ಮಾಡಿಕೊಂಡಲ್ಲಿ ನಮ್ಮ ವ್ಯವಸ್ಥೆಯೇ ಅತ್ಯಧಿಕವಾಗಿದೆ. ಅನುದಾನರಹಿತ ಶಾಲೆಗಳಲ್ಲಿ ಸಮರ್ಪಕ ಸೇವೆ ಸಲ್ಲಿಸಿದರೂ ಅಲ್ಪ ವೇತನವನ್ನು ಪಡೆಯುತ್ತಾರೆ. ದಿನವಿಡೀ ದುಡಿಯುವ ಈ ಶಿಕ್ಷಕರನ್ನು ಗುರುತಿಸುವ ಕಾರ್ಯ ಮಾಡದಿರುವುದು ದುರಂತ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸದಾ ಪ್ರಯತ್ನಿಸುತ್ತಿರುವ ಇಂತಹ ಶಿಕ್ಷಕರನ್ನು ಸಹ ಈ ಸಂದರ್ಭದಲ್ಲಿ ಗುರುತಿಸುವಂತೆ ಸಂಘವು 2012ರಿಂದಲೂ ಒತ್ತಾಯಿಸುತ್ತಿದೆ.
ಕಳೆದ 2012ರಿಂದ ಸಂಘ ಪ್ರತಿವರ್ಷ ಇಂತಹ ಬೇಡಿಕೆಯ ಮನವಿಯನ್ನು ನೀಡುತ್ತಲೇ ಬಂದಿದೆ. ಇಲ್ಲಿಯವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ ಹಿಂದೆ ಉಪಮುಖ್ಯ ಮಂತ್ರಿಗಳಾದ ಈಗಿನ ಕೆ.ಎಸ್. ಈಶ್ವರಪ್ಪ ಹಿಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಆದರೂ ನಮಗೆ ಸ್ಪಂದಿಸದಿರುವುದು ದುರಂತದ ಸಂಗತಿ. ಎಲ್ಲಾ ಶಾಲೆಗಳಂತೆ ಇಲ್ಲಿಯೂ ಸಹ ಶಿಕ್ಷಕರು ತಮ್ಮ ಸ್ವಯಂ ಸಾಮರ್ಥ್ಯದಿಂದ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡುವಲ್ಲಿ ಪ್ರಯತ್ನಿಸುತ್ತಲೇ ಇದ್ದಾರೆ. ಈ ಬಗೆಯ ಶಿಕ್ಷಕರನ್ನು ಗುರುತಿಸದೇ ಇರುವುದು ದುರಂತದ ಸಂಗತಿ. ವೃತ್ತಿಯಲ್ಲಿ ಬೇಧಭಾವ ಬೇಡ.
ಅನುದಾನರಹಿತ ಶಾಲೆಗಳಲ್ಲಿ ಎಲ್ಲಾ ಹಿರಿಯ ಕಿರಿಯ ರಾಜಕಾರಣಿಗಳು, ಜನಪ್ರತಿನಿಧಿಗಳು ವಿಶೇಷವಾಗಿ ಸರ್ಕಾರದ ಹಿರಿಯ ಅಧಿಕಾರಿಗಳ ಮಕ್ಕಳು ಇಲ್ಲಿ ಕಲಿಯುತ್ತಾರೆ. ಮಕ್ಕಳ ಕಲಿಕೆಗೆ ಈ ಶಾಲೆಗಳು ಅತ್ಯಗತ್ಯ. ಆ ಶಾಲೆಗಳ ಶಿಕ್ಷಕರಿಂದ ಲಾಭ ಪಡೆದು ಮಕ್ಕಳ ಶ್ರೇಯೋಭಿವೃದ್ಧಿ ಕಂಡು ನಂತರ ಈ ಶಿಕ್ಷಕರನ್ನು ಮರೆತರೆ ಹೇಗೆ ಎಂದು ಪ್ರಶ್ನಿಸಿದ್ದಾರೆ
ಈ ವರ್ಷದಿಂದಲಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರ ಜೊತೆ ಅನುದಾನರಹಿತ ಶಾಲೆಯ ಶಾಲೆಗಳ ಪ್ರತಿಭಾನ್ವಿತ ಶಿಕ್ಷಕರನ್ನು ಗುರುತಿಸುವ ಕಾರ್ಯ ಆರಂಭಗೊಳ್ಳಲಿದೆ. ಇದು ರಾಜ್ಯಕ್ಕೆ ಮಾದರಿ ಆದಂತಹ ವಿಷಯವಾಗಲಿ. ಹಿಂದೆ ಸಂಘವು ಜನಪ್ರತಿನಿಧಿಗಳ ಜೊತೆಗೆ ಶಿಕ್ಷಣ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಈ ವರ್ಷವೂ ಸಹ ನಮ್ಮ ಮನವಿ ಎಂದಿನಂತೆ ಮೂಲೆಗುಂಪು ಮಾಡದೆ ಮನವಿಯನ್ನು ಪುರಸ್ಕರಿಸಲು ವಿನಂತಿಸುತ್ತೇವೆ ಎಂದಿದ್ದಾರೆ.