ಶಿವಮೊಗ್ಗ, ಜು.20:
ಇಲ್ಲಿನ ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯ(ಸಿಮ್ಸ್)ದಲ್ಲಿ ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕರೊಬ್ಬರಿಂದ ಲೈಂಗಿಕ ದೌರ್ಜನ್ಯ ನಡೆದಿದ್ದು, ಅದನ್ನು ಮುಚ್ಚಿ ಹಾಕಲಾಗಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ನಗರದ ಪೀಪಲ್ಸ್ ಲಾಯರ್ಸ್ ಗಿಲ್ಡ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ತನ್ನ ಮೇಲೆ ಸಹಾಯಕ ಪ್ರಾಧ್ಯಾಪಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಜುಲೈ 5ರಂದು ಉತ್ತರ ಭಾರತದ ವೈದ್ಯಕೀಯ ವಿದ್ಯಾರ್ಥಿನಿ ಸಿಮ್ಸ್ ನಿರ್ದೇಶಕ ರಿಗೆ ಲಿಖಿತ ದೂರು ನೀಡಿದ್ದಾರೆ. ಅದನ್ನು ಕಾಲೇಜಿನ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.
ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ಮೇಲೆ ಒತ್ತಡ ಹೇರಿ ನೀಡಿರುವ ದೂರು ಹಿಂಪಡೆಯುವಂತೆ ಮಾಡಲಾಗಿದೆ. ಅದು ಖಂಡನೀಯ. ನೊಂದ ವಿದ್ಯಾರ್ಥಿನಿ ಇಲ್ಲಿ ಯಾವುದೇ ಬೆಂಬಲವಿಲ್ಲದೇ ಅಸಹಾಯಕ ರಾಗಿದ್ದು, ಇದನ್ನೇ ದುರುಪಯೋಗಪಡಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರು ಮತ್ತು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದವರ ವಿರುದ್ಧ ಕ್ರಮ ಕೈಗೊಂಡು, ಜಿಲ್ಲಾಡಳಿತದಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿ ಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲು ಮನವಿ ಮಾಡಲಾಯಿತು.
ಗಿಲ್ಡ್‌ನ ಪ್ರಮುಖರಾದ ಕೆ.ಪಿ.ಶ್ರೀಪಾಲ್, ವಿಜಯಕುಮಾರ್, ಶೀರಾಜ್, ಸ್ವರೂಪ್, ಚಿರಂತ್ ಬಿ.ಎ, ವಿಕಾಸ್, ರಘುರಾಮನ್, ಚರಣ್ ಇದ್ದರು.