ಶಿವಮೊಗ್ಗ :
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಎಸ್ ಜೆ ಕೆ ಪಿ ಎಸ್)ದ ಲಾಂಛನ (ಲೋಗೋ)ವನ್ನು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಬಿಡುಗಡೆಗೊಳಿಸಿದರು.
ಲೋಗೋ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್, ಪ್ರತಿಯೊಂದು ಸಂಘ ಸಂಸ್ಥೆಗಳಿಗೂ ಲಾಂಛನ ಬಹಳ ಮುಖ್ಯವಾಗುತ್ತದೆ. ಅದೇ ರೀತಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಲಾಂಛನ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಸಂಘ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತಾಗಲಿ, ಸಂಘಟನೆ ಮತ್ತಷ್ಟು ಬೆಳವಣಿಗೆ ಹೊಂದಲಿ, ಸಮಾಜದಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.


ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಸಂಸ್ಥೆಯ ದ್ಯೇಯೋದ್ದೇಶ ಏನಿದೆ ಅದರಂತೆ ನಡೆದರೆ ಸಂಘದ ಲಾಂಛನಕ್ಕೂ ಗೌರವ ಬರುತ್ತದೆ. ಪತ್ರಕರ್ತರು ನಿಷ್ಪಕ್ಷಪಾತ ವರದಿ ನೀಡುವುದರ ಮೂಲಕ ಸಂಘ ಹಾಗೂ ಸಂಘದ ಲಾಂಛನಕ್ಕೆ ಗೌರವ ತರಬೇಕು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾದರಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದರು.
ವಾರ್ತಾ ಇಲಾಖೆ ಹಿರಿಯ ಸಹಾಯಕ ಅಧಿಕಾರಿ ಶಫಿ ಸಾಧುದ್ದೀನ್ ಮಾತನಾಡಿ, ಪತ್ರಕರ್ತರು ಹಲವಾರು ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರ ದೊರಕಿಸಿಕೊಡುವತ್ತ ಸಂಘ ಪ್ರಯತ್ನ ನಡೆಸಬೇಕು. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕ್ರಿಯಾತ್ಮಕ ಹಾಗೂ ರಚನಾತ್ಮಕವಾದ ಕೆಲಸ ಮಾಡಬೇಕು. ಬಲಿಷ್ಠವಾದ ಸಂಘಟನೆಯಾಗಿ ಬೆಳೆಯಬೇಕು ಎಂದು ಆಶಿಸಿದರು.


ಶಿವಮೊಗ್ಗ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಪ್ರಸ್ತಾವಿಕವಾಗಿ ಮಾತನಾಡಿ, ನೂತನ ಸಂಘಟನೆ ಸದೃಢವಾಗಿ ಬೆಳೆಯಲು ಸಜ್ಜನ ಪತ್ರಕರ್ತರು ಒಂದಾಗಬೇಕು. ಸಂಘದೊಂದಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲುತ್ತೇವೆ. ಮುಂದಿನ ದಿನದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸಂಘ ಹೆಚ್ಚು ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್. ಯಡಗೆರೆ ಮಾತನಾಡಿ, ಪತ್ರಕರ್ತರಿಗೆ ಹೋದ ಕಡೆಗೆಲ್ಲಾ ಒಂದು ರೀತಿಯಲ್ಲಿ ರಾಜಮರ್ಯಾದೆ ಸಿಗುತ್ತದೆ‌. ಆದರೆ ಜೊತೆಗೆ ಕೆಲವೆಡೆ ಅಸಡ್ಡೆಗೂ ಒಳಗಾಗುತ್ತೇವೆ. ಪತ್ರಕರ್ತರಾದವರು ಇದೆಲ್ಲವನ್ನೂ ಸಮಭಾವ, ಸಮಚಿತ್ತದಿಂದ ಸಹಜವಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಪತ್ರಕರ್ತರಾದವರಿಗೆ ನಾನು ಎಂಬ ಭಾವನೆ ಎಂದಿಗೂ ಬರಬಾರದು. ನಾವು ಏನು ಎಂಬುದನ್ನು ಒಮ್ಮೆ ಆತ್ಮವಲೋಕನ ಮಾಡಿಕೊಳ್ಳಬೇಕು. ಸಮಾಜ ತಿದ್ದುವ ಕೆಲಸದಲ್ಲಿ ತೊಡಗಿಕೊಂಡಿರುವ ನಾವು ಮೊದಲು ನಮ್ಮನ್ನು ತಿದ್ದಿಕೊಳ್ಳಬೇಕು. ಸ್ಥಾನಮಾನ ಎಂದಿಗೂ ಮನುಷ್ಯನನ್ನು ಬದಲಾವಣೆ ಮಾಡಬಾರದು. ಜನ ನಮ್ಮನ್ನು ಕಾಯಕದ ಮೂಲಕ ಗುರುತಿಸಬೇಕೇ ಹೊರತು, ವಿಸಿಟಿಂಗ್ ಕಾರ್ಡ್ ಮೂಲಕವಲ್ಲ ಎಂದು ಹೇಳಿದರು.
ಪತ್ರಕರ್ತರಾದವರೆಲ್ಲರೂ ಸ್ನೇಹ ವಿಶ್ವಾಸದಿಂದ ಒಂದಾಗಿ ಸಾಗಬೇಕಿದೆ. ದ್ವೇಷ, ಅಸೂಯ ಮರೆಯಾಗಬೇಕು. ಆ ಮೂಲಕ ಹೊಸ ಶಕೆ ಆರಂಭಿಸೋಣ. ಪತ್ರಕರ್ತರ ಆರೋಗ್ಯಕ್ಕಾಗಿ ವಿಶೇಷ ಚಿಂತನೆಯನ್ನು ಸಂಘ ಹೊಂದಿದೆ. ಜಿಲ್ಲೆಯ ಪ್ರತಿಯೊಂದು ವಿಷಯವನ್ನು ಒಳಗೊಂಡಿರುವ ವೆಬ್ ಸೈಟ್ ಲೋಕಾರ್ಪಣೆಗೊಳಿಸಬೇಕು ಎಂಬ ಉದ್ದೇಶವಿದೆ. ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಸಂಘ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಮಾದರಿ ಸಂಘಟನೆಯಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮುಂದಿದ್ದು, ಇದಕ್ಕೆ ಪತ್ರಕರ್ತರು ಸಹಕಾರ ನೀಡಬೇಕು ಎಂದು ಕೋರಿದರು.
ಸಂಘದ ಗೌರವಾಧ್ಯಕ್ಷ ಎಸ್. ಚಂದ್ರಕಾಂತ್, ಸಾಗರ ತಾಲೂಕು ಸಂಘದ ಅಧ್ಯಕ್ಷ ರಮೇಶ ಹೆಗಡೆ ಗಂಡೂಮನೆ ಮೊದಲಾದವರಿದ್ದರು. ಗೊ.ವ. ಮೋಹನ್ ಕಾರ್ಯಕ್ರಮ ನಿರೂಪಿಸಿದರು, ಕಿರಣ್ ಕಂಕಾರಿ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!