ಶಿವಮೊಗ್ಗ ಜು.20:
ನ್ಯಾನೋ ಯೂರಿಯಾ (ದ್ರವ) “ಭಾರತ ಸರ್ಕಾರದ ರಸಗೊಬ್ಬರ ನಿಯಂತ್ರಣ ಕಾಯ್ದೆ 1985” ರಲ್ಲಿ ಸೇರ್ಪಡೆಯಾಗಿರುವ ಪ್ರಪಂಚದಲ್ಲಿಯೇ ಮೊಟ್ಟ ಮೊದಲ ನ್ಯಾನೋ ಗೊಬ್ಬರವಾಗಿದ್ದು ರೈತರ ಪಾಲಿಗೆ ವರದಾನವಾಗಿದೆ.
ಇದನ್ನು ಬಹಳ ವರ್ಷಗಳ ಸಂಶೋಧನೆಯ ನಂತರ ಗುಜರಾತ್‍ನ ಕಲೋಲ್‍ನಲ್ಲಿರುವ ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ದಿಪಡಿಸಲಾಗಿದೆ. ಇದು ಶೇ.4 ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿದೆ. ಸುಮಾರು 50 ಕೆ.ಜಿ. ಬ್ಯಾಗ್‍ನ ರಸಗೊಬ್ಬರ ಬಳಕೆ ಮಾಡುವಷ್ಟು ಜಾಗದಲ್ಲಿ ಕೇವಲ 250 ಮಿ.ಲೀ.ನಷ್ಟು ನ್ಯಾನೋ ಯೂರಿಯಾ ಬಳಕೆ ಮಾಡಿದರೆ ಸಾಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾಗುವ ಕಾರಣ ರೈತರ ಹಣವು ಉಳಿಯುತ್ತದೆ
ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ.20 ರಿಂದ 25 ಮಾತ್ರವೇ ಲಭ್ಯವಾಗುತ್ತಿದ್ದು, ಉಳಿದ ಪ್ರಮಾಣವು ವಿವಿಧ ರೀತಿಯಲ್ಲಿ ಬೆಳೆಗಳಿಗೆ ದೊರೆಯದೇ ನಷ್ಟವಾಗುತ್ತದೆ. ಆದರೆ ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿದ್ದು, (20-50nm) ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ.80 ರಷ್ಟು ಗೊಬ್ಬರವನ್ನು ಉಪಯೋಗಿಸಲ್ಪಡುತ್ತದೆ.

ಇದರಿಂದ ಸಸ್ಯದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಇದು ಸಸ್ಯದೊಳಗಿನ ಸಾರಜನಕನ ಮತ್ತು ಇತರೆ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸಿ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿ ಬೆಳೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತದೆ. ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ.


ನ್ಯಾನೋ ಯೂರಿಯಾವನ್ನು ಬಳಸುವ ವಿಧಾನ:

ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4 ಮಿ.ಲೀ. ನ್ಯಾನೋ ಯೂರಿಯಾವನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಕ್ಕಾಗಿ 20 ರಿಂದ 25 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು.
ಮೊಳಕೆ ಹೊಡೆದ 30 ರಿಂದ 35 ದಿನಗಳ ನಂತರ ಅಥವಾ ನಾಟಿ ಮಾಡಿದ 20 ರಿಂದ 25 ದಿನಗಳ ನಂತರ (ಸಕ್ರಿಯ ಬೆಳವಣಿಗೆ ಅಥವಾ ಕವಲೊಡೆಯುವ ಹಂತ) ಮೊದಲನೇ ಸಿಂಪಡಣೆ ಹಾಗೂ ಹೂ ಬರುವ ಮುಂಚಿತವಾಗಿ ಅಥವಾ 20 ರಿಂದ 25 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!