V K ಚಿತ್ರ
ಶಿವಮೊಗ್ಗ ಜು.3:
2022-23 ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಕಾರ್ಯವು ತಾಲ್ಲೂಕಿನಾದ್ಯಂತ ಪ್ರಾರಂಭಗೊಂಡಿದ್ದು ರೈತರು ಕಳೆದ ವರ್ಷದಂತೆ ಈ ವರ್ಷವೂ ಸಹ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ತಾಲ್ಲೂಕಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು “ಮುಂಗಾರು ರೈತ ಬೆಳೆ ಸಮೀಕ್ಷೆ 2022-23” (Kharif Farmer Crop Survey 2022-23) ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ-ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ರೈತರ ಆಧಾರ್ ಸಂಖ್ಯೆಯನ್ನು ಸ್ಕ್ಯಾನ್ ಮಾಡಿಕೊಂಡು ಆಧಾರ್ ವಿವರ ಮತ್ತು ಮೊಬೈಲ್ ಅಪ್ಲಿಕೇಷನ್ನಲ್ಲಿರುವ ಮಾಸ್ಟರ್ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಮ್ಮ ಜಮೀನಿನ ಸರ್ವೆ ನಂಬರ್ಗಳನ್ನು ಅಪ್ಲಿಕೇಷನ್ಗೆ ಸೇರಿಸಿಕೊಳ್ಳಬೇಕು.
ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಬೇಕು. ಈ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ, ಈಗಾಗಲೇ ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿಹೊಂಡ , ಮನೆ ಇತರೆ) ಬಳಕೆಯಾದ ಪ್ರದೇಶದ ವಿವರವನ್ನು ಸಹ ದಾಖಲಿಸಬೇಕಾಗಿರುತ್ತದೆ. ರೈತರು ತಾವು ಬೆಳೆದ ಪ್ರತಿ ಬೆಳೆಯ 2 ಛಾಯಾಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕಾಗಿರುತ್ತದೆ. ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು(ಮೇಲ್ವಿಚಾರಕರು) ಪರಿಶೀಲಿಸಿ ಅನುಮೋದಿಸುತ್ತಾರೆ. ಒಂದು ವೇಳೆ ರೈತರು ದಾಖಲಿಸಿದ ಬೆಳೆ ವಿವರಕ್ಕೂ ಛಾಯಾಚಿತ್ರಕ್ಕೂ ತಾಳೆಯಾಗದ ಸಂದರ್ಭದಲ್ಲಿ ಮೇಲ್ವಿಚಾರಕರು ಅಂತಹ ಮಾಹಿತಿಯನ್ನು ತಿರಸ್ಕರಿಸಿ ಮರು ಸಮೀಕ್ಷೆಗೆ ಖಾಸಗಿ ನಿವಾಸಿಗಳನ್ನು ಕಳುಹಿಸಲಾಗುವುದು.
ಒಂದು ವೇಳೆ ರೈತರು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಹಾಯ ಮಾಡುವುದಾದರೆ ಅವರ ಸರ್ವೆ ನಂಬರ್ಗಳನ್ನು ಸಹ ತಮ್ಮ ಮೊಬೈಲ್ ಅಪ್ಲಿಕೇಷನ್ನಲ್ಲಿ ಸೇರಿಸಿಕೊಂಡು ಅವರ ಜಮೀನಿನ ವಿವರ ದಾಖಲಿಸಲೂ ಸಹ ಅವಕಾಶ ಕಲ್ಪಿಸಲಾಗಿದೆ. ಒಬ್ಬ ರೈತರು ಮೊಬೈಲ್ ಅಪ್ಲಿಕೇಷನ್ನಲ್ಲಿ 10 ಜಮೀನುಗಳ ಬೆಳೆ ವಿವರ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ನಿಗದಿತ ಸಮಯದಲ್ಲಿ ಬೆಳೆ ವಿವರ ದಾಖಲಿಸಲಾಗದ ರೈತರ ಜಮೀನಿನ ಬೆಳೆ ವಿವರಗಳನ್ನು ಖಾಸಗಿ ನಿವಾಸಿಗಳು ದಾಖಲಿಸುತ್ತಾರೆ.
ಬೆಳೆ ಸಮೀಕ್ಷೆ ಮಾಹಿತಿಯನ್ನು ಸರ್ಕಾರದ ಯೋಜನೆಗಳಿಗೆ ಬಳಸಲಾಗುತ್ತದೆ. ಎನ್.ಡಿ.ಆರ್.ಎಫ್./ಎಸ್.ಆರ್.ಎಫ್.ಅಡಿಯಲ್ಲಿ ಪ್ರವಾಹ ಮಾಹಿತಿ, ಬರಗಾಲ ಸಂದರ್ಭದಲ್ಲಿ ನೀಡುವ ನಷ್ಠ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕೆ,್ಕ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಲು ಸಹಕಾರಿಯಾಗಲಿದ್ದು ತಾಲ್ಲೂಕಿನ ರೈತರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ತಾವೇ ಸರ್ಕಾರಕ್ಕೆ ನಿಗದಿತ ಸಮಯದೊಳಗೆ ನಮೂದಿಸುವಂತೆ ಶಿವಮೊಗ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್.ಹೆಚ್.ಎಸ್. ಪ್ರಕಟಣೆಯಲ್ಲಿ ಕೋರಿದ್ದಾರೆ.
Kharif Farmer Crop Survey 2022-23)


