ಭದ್ರಾವತಿ,
ಇಷ್ಟು ದಿನ ಇಲಾಖೆ ಸಿದ್ಧಪಡಿಸಿದ ರೀತಿ ಯಲ್ಲಿ ಮಕ್ಕಳ ಶಿಕ್ಷಣ ನಡೆದಿದ್ದು, ಇನ್ನು ಮುಂದೆ ಮಕ್ಕಳ ಆಸಕ್ತಿಗೆ ತಕ್ಕ ವಿಷಯಗಳನ್ನು ಕಲಿಯುವ ಅವಕಾಶ ಹೊಸ ಶಿಕ್ಷಣ ನೀತಿಯಿಂದ ಸಿಗಲಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ವಿವಿಧ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಭೋಜನ, ಸಂವಾದ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
’ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸುವ ಕೆಲಸವನ್ನು ಈಗಾಗಲೇ ಆರಂಭಿ ಸಿದ್ದು, ತಜ್ಞರ ಅಭಿಪ್ರಾಯ ಸಲಹೆಯಂತೆ ಮಕ್ಕಳಿಗೆ ಮೂರು ವರ್ಷದಿಂದಲೇ ಪ್ರೀ ನರ್ಸರಿ ಕಲಿಸುವ ಕೆಲಸ ಆರಂಭವಾಗಲಿದೆ’ ಎಂದರು.
’ಪ್ರೌಢಶಾಲೆ ಪ್ರವೇಶ ಪಡೆಯುತ್ತಿದ್ದಂತೆ ಅವರ ಆಸಕ್ತ ವಿಷಯಗಳ ಕಲಿಕೆ ಜತೆಗೆ ಸ್ವಾವಲಂಬಿಯಾಗಿ ಬದುಕುವ ಕೌಶಲ ಕಲಿಸಲಾಗುವುದು. 12 ನೇ ತರಗತಿ ತಲುಪು ವಷ್ಟರಲ್ಲಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಸೌಲಭ್ಯ ದೊರೆಯಲಿದೆ’ ಎಂದು ಹೇಳಿದರು.
ಶಿಕ್ಷಣ ವಂಚಿತರಾಗಬಾರದು: ’ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ವ ಶಿಕ್ಷಣ ಅಭಿ ಯಾನ ಆರಂಭಿಸಿದರು. ಇದರ ಪರಿಣಾಮ ಪ್ರತಿ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ಕಾಣಲು ಸಾಧ್ಯವಾಯಿತು. ಈಗಿರುವ ಏಕ ಉಪಾಧ್ಯಾಯ ಶಾಲೆಗಳಲ್ಲಿ ಇಬ್ಬರು ಶಿಕ್ಷಕರನ್ನು ನೇಮಿಸುವ ಕೆಲಸ ಆರಂಭವಾಗಿದೆ. ಇದಕ್ಕೆ ಕೇಂದ್ರದ ಅನುದಾನ ಸಿಗುತ್ತಿದೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಅಧಿಕಾರಿಗಳಾದ ರವಿಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಹಾಜರಿದ್ದರು.