ಶಿವಮೊಗ್ಗ: ವಿನೋಬನಗರ ರೈಲ್ವೆ ಗೇಟ್ ಬಳಿ ಮಂಗಳವಾರ ತಡರಾತ್ರಿ ಕಾರು ಅಡ್ಡಗಟ್ಟಿದ ಯುವಕರ ಗುಂಪು ಚಾಲಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ, 2 ಸಾವಿರ ರೂ. ನಗದು ಹಾಗೂ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕೋಟೆಗಂಗೂರಿನ ಶಕ್ತಿ ಧಾಮದ ಮಯೂರ್ ನಾಯ್ಕ ಅವರು ಆತನ ತಾಯಿ ಜಯಲಕ್ಷ್ಮೀ ಮತ್ತು ಸಹೋದರ ಹರೀಶ್ ಅವರು ಮಂಗಳವಾರ ರಾತ್ರಿ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಂಡು ವಾಪಸ್ ಬರುವಾಗ ಈ ಘಟನೆ ನಡೆದಿದೆ.
ವಿನೋಬನಗರದ ರೈಲ್ವೆ ಗೇಟ್ ಬಳಿ ಬರುತ್ತಿದ್ದ ವೇಳೆ ಹಂಪ್ ಇದ್ದ ಕಾರಣಕ್ಕೆ ಮಯೂರ್ ನಾಯ್ಕ್ ಕಾರಿನ ವೇಗ ಕಡಿಮೆ ಮಾಡಿದ್ದರು. ಹಂಪ್ ಹತ್ತುವಾಗ ಕಾರು ದಿಡೀರನೇ ಆಫ್ ಆಗಿತ್ತು. ಈ ವೇಳೆ ಬೈಕ್‌ಗಳಲ್ಲಿ ಬಂದ ಯುವಕರ ಗುಂಪು ಕಾರನ್ನು ಅಡ್ಡಗಟ್ಟಿ ಮಯೂರ್ ನಾಯ್ಕನನ್ನು ಹೊರಗೆಳೆದು ಹಲ್ಲೆ ಮಾಡಿ ಚಾಕುವಿನಿಂದ ಕಾಲಿಗೆ ಇರಿದು ಗಾಯಗೊಳಿಸಿದೆ. ಕಾರಿನ ಹಿಂಬದಿಯಲ್ಲಿದ್ದ ಜಯಲಕ್ಷ್ಮೀ ಮತ್ತು ಹರೀಶ್‌ಗೂ ಸಹ ರೇಜರ್ ತೋರಿಸಿ ಬೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.