ಶಿವಮೊಗ್ಗ ಮೇ 12:
ನಗರದ ಮೆಗ್ಗಾನ್ ಆಸ್ಪತೆಯಲ್ಲಿ ಮೇ 12 ರ ರಾತ್ರಿ ವೇಳೆ ಡ್ಯೂಟಿ ಡಾಕ್ಟರ್ ಇಲ್ಲದಿರುವುದನ್ನು ಖಂಡಿಸಿ ಆಸ್ಪತ್ರೆಯ ಮುಂಭಾಗ ರಾತ್ರಿ ದಿಢೀರ್ ಪ್ರತಿಭಟನೆ ಕುರಿತಾಗಿ ಕೆಲವು ಪತ್ರಿಕೆಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ತನಿಖೆ ನಡೆಸಿ ಈ ಕೆಳಕಂಡಂತೆ ಸ್ಪಷ್ಟೀಕರಣ ನೀಡಿದ್ದಾರೆ.
ಪ್ರವೀಣ್ ಕೆ.ಪಿ.ಬಿನ್ ಪ್ರಭಾಕರ್ 23 ವರ್ಷ ಕಾಂತುಗಡ್ಡೆ ತೀರ್ಥಹಳ್ಳಿ ಇವರನ್ನು ಮೇ 12 ರ ಮಧ್ಯರಾತ್ರಿ 12.12 ಕ್ಕೆ ಆಂಬುಲೆನ್ಸ್‍ನಲ್ಲಿ ತೀರ್ಥಹಳ್ಳಿಯಿಂದ ಮೆಗ್ಗಾನ್ ಆಸ್ಪತ್ರೆಗೆ ಶಿಫಾರಸು ಪತ್ರದೊಂದಿಗೆ ಕರೆತರಲಾಗಿದ್ದು ರೋಗಿಯು ಹೊಡೆದಾಟದಿಂದ ಗಾಯಗೊಂಡಿದ್ದರಿಂದ ಜೆ.ಸಿ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ. ಆಂಬುಲೆನ್ಸ್ನಿಂದ ರೋಗಿಯನ್ನು ವೀಲ್‍ಚೇರ್‍ನಲ್ಲಿ ತುರ್ತು ಚಿಕಿತ್ಸಾ ಘಟಕಕ್ಕೆ ಕರೆತಂದು ರೋಗಿಯನ್ನು ಪರಿಶೀಲಿಸಲಾಗಿ ಆತನ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.
ಮಧ್ಯರಾತ್ರಿ 12.14 ಕ್ಕೆ ತುರ್ತು ಚಿಕಿತ್ಸಾ ವೈದ್ಯರು, ಸರ್ಜರಿ ‘ಸಿ’ವಿಭಾಗದ ಶಸ್ತ್ರಚಿಕಿತ್ಸಾ ವೈದ್ಯರು ಕೂಡಲೇ ಚಿಕಿತ್ಸೆಯನ್ನು ಪ್ರಾರಂಭಿಸಿರುತ್ತಾರೆ. ಹಾಗೂ ಗಾಯಗೊಂಡ ರೋಗಿಯ ಬ್ಯಾಂಡೇಜ್‍ನ್ನು ತೆಗೆದು ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರು ಮತ್ತು ಕ್ಯಾಜುಯಾಲಿಟಿಯಲ್ಲಿರುವ ವೈದ್ಯರು ಸಂಪೂರ್ಣವಾಗಿ ಪರಿಶೀಲಿಸಿ ರೋಗಿಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿರುತ್ತಾರೆ. ನಂತರ ಸಿ.ಟಿ ಸ್ಕ್ಯಾನ್ ಮಾಡಿಸಲು ವೈದ್ಯರು ಸಲಹೆ ನೀಡಿದ್ದು, ರಾತ್ರಿ 12.30 ಕ್ಕೆ ಸಿ.ಟಿ ಸ್ಕ್ಯಾನ್ ಮಾಡಿಸಲು ಕಳುಹಿಸಲಾಗಿದೆ. ಸ್ಕ್ಯಾನ್ ಮಾಡಿಸಿಕೊಂಡು 12.45 ಕ್ಕೆ ಮತ್ತೆ ಕ್ಯಾಜುಯಾಲಿಟಿ ವಿಭಾಗಕ್ಕೆ ರೋಗಿಯು ಬಂದಿರುತ್ತಾರೆ.


ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರು ರೋಗಿಯನ್ನು ದಾಖಲು ಮಾಡಲು ತಿಳಿಸಿದ್ದು, ಸಿ.ಟಿ.ಸ್ಕ್ಯಾನ್ ವರದಿ ಬರಲು 2 ಗಂಟೆ ಆಗುವುದರಿಂದ ತುರ್ತು ಚಿಕಿತ್ಸಾ ವಾರ್ಡ್‍ನಲ್ಲಿ ಹಾಸಿಗೆಗಳು ಖಾಲಿ ಇಲ್ಲದೇ ಇರುವುದರಿಂದ ಆ ದಿನ ಸರ್ಜರಿ ‘ಸಿ’ ಯೂನಿಟ್‍ನ ಓಪಿಡಿ ಇರುವುದರಿಂದ ಆ ವಾರ್ಡ್‍ನಲ್ಲಿಯೇ ಅವರನ್ನು ದಾಖಲು ಮಾಡಬೇಕಾಗಿರುತ್ತದೆ. ಆದರೆ ಆ ವಾರ್ಡ್‍ನಲ್ಲಿ ಶುಶ್ರೂಷಾಧಿಕಾರಿ ಪರಿಶೀಲಿಸಿ, ಹಾಸಿಗೆ ಲಭ್ಯವಿರುವುದಿಲ್ಲವೆಂಬ ಮಾಹಿತಿ ಪಡೆದು ಬೇರೆ ವಿಭಾಗದಲ್ಲಿ ಹಾಸಿಗೆಯ ಲಭ್ಯತೆಯನ್ನು ಹುಡುಕುವುದರಲ್ಲಿ ವಿಳಂಬವಾಗಿರುತ್ತದೆ.
ನಂತರ ಸರ್ಜರಿ ‘ಇ’ ವಾರ್ಡ್‍ನಲ್ಲಿ ಹಾಸಿಗೆ ಲಭ್ಯತೆ ಇರುವುದು ಕಂಡು ಬಂದಿದ್ದು ರೋಗಿಯನ್ನು ಆ ವಾರ್ಡ್‍ಗೆ ಸ್ಥಳಾಂತರಿಸಲಾಯಿತು. ರೋಗಿಯ ಸ್ಥಿತಿ ಉತ್ತಮವಾಗಿರುವುದರಿಂದ ವೀಲ್‍ಚೇರಿನಲ್ಲಿ ಸರ್ಜರಿ ವಾರ್ಡಿಗೆ ಸ್ಥಳಾಂತರಿಸಲಾಯಿತು.
ರೋಗಿಯ ಕೇಸ್‍ಶೀಟ್, ಸಿಸಿ ಟಿವಿ ಫುಟೇಜ್ ಮುಂತಾದ ಇತರೆ ದಾಖಲೆಗಳನ್ನು ಪರಿಶೀಲಿಸಿ ರೋಗಿಯ ತಪಾಸಣೆಯಲ್ಲಾಗಲಿ, ಚಿಕಿತ್ಸೆಯಲ್ಲಾಗಲೀ ಯಾವುದೇ ವಿಳಂಬವಾಗಿರುವುದಿಲ್ಲವೆಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!