ಭದ್ರಾವತಿ, ಆ.14:
ಅಪಾರ ಪ್ರಮಾಣದ ಭೂಮಿಗೆ ನೀರುಣಿಸಿ ಅನ್ನದಾತನ ಉಸಿರಾದ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ಭದ್ರಾ ಅಣೆಕಟ್ಟು ತುಂಬುವ ಸನಿಹದಲ್ಲಿ ಕಂಗೊಳಿಸುತ್ತಿದೆ.
ಶಿವಮೊಗ್ಗ ದಾವಣಗೆರೆ, ಹೊಸಪೇಟೆ, ಹಾವೇರಿ ಜಿಲ್ಲೆ ಸೇರಿದಂತೆ ಸಾವಿರಾರು ಎಕರೆ ಭತ್ತ, ಕಬ್ಬು, ತೆಂಗು ಹಾಗೂ ಅಡಿಕೆಗೆ ನೀರು ನೀಡುತ್ತಾ ಸಾವಿರಾರು ರೈತ ಕುಟುಂಬಗಳನ್ನು ಸಲಹುತ್ತಿರುವ ಭದ್ರೆಯ ಬಾಹುಗಳು ನಲಿದಾಡುವ ಕ್ಷಣ ಕಾಣುತ್ತಿದೆ.
ಇಂದಿನ ಮಾಹಿತಿ ಪ್ರಕಾರ 186 ಅಡಿಯ ತುಂಗೆಯ ಅಂಗಳದಲ್ಲಿ ಪ್ರಸಕ್ತ 177. ಅಡಿ ನೀರಿದ್ದು 60.808 ಟಿಎಂಸಿ ಸಾಮರ್ಥ್ಯದ ಭದ್ರೆಗೆ ಈಗ 12040 ಕ್ಯೂಸೆಕ್ಸ್ ನೀರಿನ ಒಳಹರಿವಿದೆ . ಇಷ್ಟೊಂದು ದೊಡ್ಡ ಪ್ರಮಾಣ ಒಳ ಹರಿವಿರುವ ಭದ್ರೆಯಿಂದ ಈಗ 3800 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಭೂತಾಯಿಗೆ ನೀರುಣಿಸುವ ಭದ್ರಾ ಹೊಸಪೇಟೆಯವರೆಗೆ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಿದೆ. ಗ್ರಾಮಗಳ ಜನ ಜಾನುವಾರುಗಳನ್ನು ಸಾಕುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಹೊಂದಿಕೊಂಡಿರುವ ಹಾಗೂ ಶಿವಮೊಗ್ಗ ಅಂಗಣಕ್ಕೆ ಸೇರಿದ ಭದ್ರೆಯ ಬಿ ಆರ್ ಪಿ ಯಲ್ಲಿನ ಭದ್ರಾ ಜಲಾಶಯ ನೋಡಲು, ನಲಿದಾಡಲು ಸುಂದರ ಕ್ಷಣವನ್ನು ಸೃಷ್ಟಿಸಿದೆ.
ಭದ್ರೆ ತುಂಬುವ ಸನಿಹದಲ್ಲಿ ಕಂಗೊಳಿಸುತ್ತಿದ್ದಾಳೆ.
ಚಿತ್ರ ಕೃಪೆ ವಿದ್ಯಾ