ಶಿವಮೊಗ್ಗ,ಆ.14: ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶ ಹಾಗೂ ಪಕ್ಕದ ಗ್ರಾಮದ ಅಭಿವೃದ್ದಿಗೆ ಪೂರಕವಾದ ಕೆಲಸ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ ಎಂಬುದಕ್ಕೆ ಈ ಘಟನೆ, ಗ್ರಾಮಸ್ಥರ ರಕ್ಷಣೆಯೇ ಕಾರಣ.
ಕೈಗಾರಿಕಾ ಪ್ರದೇಶ ವ್ಯಾಪ್ತಿಯಿಂದ ಗ್ರಾಮಸ್ಥರ ಮನೆ ಹಾಗೂ ಸ್ಮಶಾನದ ಜಾಗವನ್ನು ಕೈಬಿಡಲು ರಾಜ್ಯ ಸರ್ಕಾರ ಮಹತ್ವ ತೀರ್ಮಾನ ಕೈಗೊಂಡಿದೆ. ಇದು ಮುಖ್ಯ ಮಂತ್ರಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನಕ್ಕೆ ಸಂದ ಗೌರವ ಎನ್ನಲೇಬೇಕು.
ಕಳೆದ ಏಳೆಂಟು ವರುಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಕೈಗಾರಿಕಾ ಪ್ರದೇಶ ನಿರ್ಮಾಣ ಹಾಗೂ ಕೈಗಾರಿಕೆಗಳನ್ನು ತರುವ ಪ್ರಯತ್ನಕ್ಕೆ ಮತ್ತೆ ಚಾಲನೆ ದೊರೆತಿದೆ. ಪೂರಕ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಾರಣಕರ್ತರೆಂದರೆ ಮತ್ತೆ ಇದೇ ಯಡಿಯೂರಪ್ಪ ಎಂದರೆ ತಪ್ಪಾಗಿಕ್ಕಿಲ್ಲ.
ಕೈಗಾರಿಕಾ ಪ್ರದೇಶ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ ಅವರ ಕಚೇರಿಯಿಂದ ಅಧಿಕೃತ ಮಾಹಿತಿ ಬಿಡುಗಡೆಯಾದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಕೈಗಾರಿಕೋಧ್ಯಮಿಗಳಿಗೆ ವಿಧಿಸಲಾಗಿದ್ದ ಬಡ್ಡಿ ಹಾಗೂ ಪೆನಾಲ್ಟಿಯನ್ನು ಮನ್ನಾ ಮಾಡಲು ಹಾಗೂ ಗ್ರಾಮದ ಗ್ರಾಮಸ್ಥರ ಮನೆ ಮತ್ತು ಸ್ಮಶಾನದ ಜಾಗವನ್ನು ಕೈಗಾರಿಕಾ ಪ್ರದೇಶ ವ್ಯಾಪ್ತಿಯಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.
ಕಳೆದ ಜುಲೈ 1ರಂದು ಶಿವಮೊಗ್ಗ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಹಾಗೂ ಈಗಾಗಲೇ ಕೈಗಾರಿಕಾ ಪ್ರದೇಶ ಮಂಜೂರಾಗಿದ್ದರೂ ವಿದ್ಯುಚ್ಚಕ್ತಿ ಸರಬರಾಜು ಘಟಕ ಸ್ಥಾಪನೆಯಾಗದೇ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲದಿರುವುದನ್ನು ಗಮನಕ್ಕೆ ತರಲಾಗಿತ್ತು. ಹಾಗೆಯೇ ಕೈಗಾರಿಕೋದ್ಯಮಿಗಳು ಕೈಗಾರಿಕೆ ಸ್ಥಾಪನೆ ಮಾಡದೇ ಇದ್ದರೂ, ಅವರುಗಳಿಗೆ ಬಡ್ಡಿ ಹಾಗೂ ಪೆನಾಲ್ಟಿ ಕಟ್ಟುವಂತೆ ಕೆ.ಐ.ಎ.ಡಿ.ಬಿ. ವತಿಯಿಂದ ನಿರಂತರ ನೋಟೀಸ್‌ಗಳನ್ನು ನೀಡುತ್ತಿರುವುದನ್ನು ಮಾನ್ಯ ಸಚಿವರ ಗಮನಕ್ಕೆ ಸಂಸದ ರಾಘವೇಂದ್ರ ಅವರು ತಂದಿದ್ದರು.
ಅದಷ್ಟು ಶೀಘ್ರ ಬಡ್ಡಿ ಮತ್ತು ಪೆನಾಲ್ಟಿಯನ್ನು ಮನ್ನಾ ಮಾಡುವಂತೆ ಒತ್ತಾಯಿಸಲಾಗಿತ್ತು. ಮತ್ತು ಅದೇ ರೀತಿ ದೇವಕಾತಿ ಕೊಪ್ಪದ ಕೈಗಾರಿಕಾ ಪ್ರದೇಶದ ಆರಂಭದಲ್ಲಿ ಗ್ರಾಮಸ್ಥರ ಮನೆಗಳು ಮತ್ತು ಸ್ಮಶಾನವಿದ್ದು, ಸದರಿ ಪ್ರದೇಶವನ್ನು ಕೈಗಾರಿಕಾ ಪ್ರದೇಶದಿಂದ ಕೈಬಿಡುವಂತೆ ಸಹ ವಿನಂತಿಸಲಾಗಿತ್ತು. ಸಂಸದರ ಮನವಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂಸದ ಬಿ.ವೈ. ರಾಘವೇಂದ್ರ, ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್‌ನಾಯ್ಕ್ , ಹಾಗೂ ಕರ್ನಾಟಕ ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಇವರುಗಳ ಮನವಿಗೆ ಸ್ಪಂದಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ದೇವಕಾತಿಕೊಪ್ಪದಲ್ಲಿ ಆದಷ್ಟು ತ್ವರಿತವಾಗಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಟ್ಟ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.