ಶಿವಮೊಗ್ಗ : ನವೆಂಬರ್ 02 : ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ಕಾರಿ ಭೂಮಿ ಅಥವಾ ಅರಣ್ಯ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನರು ಒಕ್ಕಲೆಬ್ಬಿಸುವ ಹಾಗೂ ನೋಟೀಸ್ ನೀಡಿ ಆತಂಕಕ್ಕೀಡುವ ಮಾಡದಂತೆ ಈಗಾಗಲೇ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.


ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ೨೦೨೪-೨೫ನೇ ಸಾಲಿನ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ಕಾರದ ಸೂಚನೆ ಮೀರಿ ರೈತರನ್ನು ಒಕ್ಕಲೆಬ್ಬಿಸುವ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಂತಹ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದ ಅವರು ಶೀಘ್ರದಲ್ಲಿ ಸಾಗುವಳಿದಾರರ ಹಲವು ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದವರು ನುಡಿದರು.
ಅನ್ನಭಾಗ್ಯ, ಗೃಹಭಾಗ್ಯ ಮತ್ತಿತರ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭವಿಗಳಗೆ ಸರ್ಕಾರದ ವತಿಯಿಂದ ನೀಡಲಾಗುವ ಸಹಾಯಧನವನ್ನು ಬ್ಯಾಂಕುಗಳ ವ್ಯವಸ್ಥಾಪಕರು ಗ್ರಾಹಕರು ಈಗಾಗಲೇ ಮಾಡಿರುವ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬರುತ್ತಿವೆ. ಬ್ಯಾಂಕುಗಳ ಶಾಖಾ ವ್ಯವಸ್ಥಾಪಕರು ಜನಸಾಮಾನ್ಯರ ಗಮನಕ್ಕೆ ಬರದೆ ಹಣ ಕಟಾವು ಮಾಡಿಕೊಳ್ಳುವುದು ಸರಿಯಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೆಗ್ಗಾನ್ ಆಸ್ಪತ್ರೆಯ ಆಡಳಿತ ವ್ಯವಸ್ಥೆ, ವೈದ್ಯರು ಹಾಗೂ ಅಲ್ಲಿನ ಸಿಬ್ಬಂಧಿಗಳ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಅಲ್ಲದೇ ಅಲ್ಲಿನ ಯಂತ್ರೋಪಕರಣಗಳು ಬಳಕೆಯಾಗದೆ ಹಾಗೆಯೇ ಉಳಿದಿವೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ

ದೊರೆಯುವ ಸೌಲಭ್ಯಗಳಿಗೆ ಭಾರೀ ಪ್ರಮಾಣದ ಶುಲ್ಕ ವಿಧಿಸಲಾಗುತ್ತಿದೆ. ಸ್ಕ್ಯಾನಿಂಗ್ ಮತ್ತಿತರ ತಪಾಸಣೆಗಳಿಗೆ ತಿಂಗಳುಗಳು ಕಾಲಾವಕಾಶ ನೀಡಲಾಗುತ್ತಿದೆ. ವಾಂತಿ-ಬೇಧಿಯಂತಹ ಸಾಮಾನ್ಯ ಕಾಯಿಲೆಗಳಿಗೆ ಉಚಿತವಾಗಿ ದೊರೆಯಬೇಕಾದ ಔಷಧಗಳು ಲಭ್ಯವಾಗುತ್ತಿಲ್ಲ. ಈ ಸಂಬಂಧ ಇಲ್ಲಿನ ಅಧಿಕಾರಿ-ಸಿಬ್ಬಂಧಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ಕರೆಯುವಂತೆ ಶಾಸಕ ಆರಗ ಜ್ಞಾನೇಂದ್ರ ಅವರು ಸಚಿವರನ್ನು ಒತ್ತಾಯಿಸಿದರು.


ಈ ಸಂಬಂಧ ಸ್ಥಳೀಯ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡಿದ ನಂತರ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಬೆಳಗಾವಿಯಲ್ಲಿ ನಡೆಯಲಿರುವ ಛಳಿಗಾಲದ ಅಧಿವೇಶನ ಸಂದರ್ಭದಲ್ಲಿ ಇಲ್ಲಿನ ಮುಖ್ಯ ಅಧಿಕಾರಿ-ಸಿಬ್ಬಂಧಿಗಳು ಹಾಗೂ ಇಲ್ಲಿನ ಜನಪ್ರತಿಗಳನ್ನು ಆಹ್ವಾನಿಸಿ, ಆರೋಗ್ಯ ಮತ್ತು ಉನ್ನತ ಶಿಕ್ಷಣ ಸಚಿವ ಧ್ವಯರ ಉಪಸ್ಥಿತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಇಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯ ಆರಂಭಗೊಂಡಿತ್ತು. ಈ ಕಟ್ಟಡದ ಸ್ಥಳದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲಿ ಇತ್ಯರ್ಥಗೊಂಡು ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದ್ದು, ಕೇಂದ್ರವು ಆವರ್ತನಿಧಿ ಯೋಜನೆಯಡಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ ರೂ.೨೩೦೦/-ಗಳನ್ನು ನಿಗಧಿಪಡಿಸಿದೆ. ರಾಜ್ಯ ಸರ್ಕಾರವು ಇದಕ್ಕೆ ಪೂರಕವಾಗಿ ೭೦೦/-ರೂ.ಗಳನ್ನು ಸೇರಿಸಿ, ೩,೦೦೦/-ರೂ. ದರ ನಿಗಧಿಪಡಿಸಿ, ಬೆಂಬಲಬೆಲೆಯಲ್ಲಿ ರೈತರಿಂದ ಭತ್ತ ಖರೀದಿಸಲು ಮುಂದಾಗಬೇಕು. ಇದರಿಂದಾಗಿ ರೈತರಿಗೆ ಸಹಕಾರಿಯಾಗಲಿದೆ ಎಂದ ಅವರು, ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಸೂಚನೆ ನೀಡುವಂತೆ ಅವರು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಶಾಲೆಯೊಂದರಲ್ಲಿನ ಶಿಕ್ಷಕರಿಬ್ಬರ ದುರ್ವರ್ತನೆ ಹದ್ದುಮೀರಿದ್ದು, ಇದರಿಂದಾಗಿ ತಾಲೂಕಿಗೆ ಹಾಗೂ ಶಿಕ್ಷಣ ಇಲಾಖೆಗೆ ಅಗೌರವವಾಗಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಯಾವುದೇ ಕ್ರಮ ವಹಿಸುತ್ತಿಲ್ಲ. ಅಂತಹ ಶಿಕ್ಷಕರನ್ನು ತಮ್ಮ ಕಚೇರಿಗೆ ವರ್ಗಾಯಿಸಿಕೊಂಡು ತಮ್ಮ ಅಭಿಮಾನ ಪ್ರದರ್ಶಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ತೀರ್ಥಹಳ್ಳಿ ತಾಲೂಕಿನ ವ್ಯಾಪ್ತಿ ವಿಶಾಲವಾಗಿದ್ದು, ಅಲ್ಲಿ ತಾಲೂಕು ಕ್ಷೇತ್ರ

ಶಿಕ್ಷಣಾಧಿಕಾರಿಗಳಿಗೆ ಶಾಲೆಗಳ ಭೇಟಿ ಮತ್ತು ತುರ್ತು ಪರಿಶೀಲನೆಗೆ ಅಗತ್ಯವಾಗಿರುವ ವಾಹನ ನೀಡದಿರುವುದು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ತೀವ್ರತರಹದ ಅಡಚಣೆ ಉಂಟಾಗಿದೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರ ನಿರ್ಲಕ್ಷ್ಯದಿಂದಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳು ವಾಹನವಿಲ್ಲದೆ ಕಾರ್ಯನಿರ್ವಹಿಸುವಂತಾಗಿದೆ. ಕೂಡಲೇ ವಾಹನವನ್ನು ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಮುಂದಿನ ಒಂದು ವಾರದೊಳಗಾಗಿ ದುರ್ವರ್ತನೆ ತೋರುವ ಶಿಕ್ಷಕರ ಕ್ರಮ ಕೈಗೊಂಡು ವರದಿ ನೀಡುವಂತೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಾಹನ ಒದಗಿಸುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಮಾಪನ ಯಂತ್ರಗಳ ಕಳವು, ದುರಸ್ತಿ ಮುಂತಾದ ಕಾರಣದಿಂದಾಗಿ ಅತೀವೃಷ್ಟಿ ಮತ್ತು ಅನಾವೃಷ್ಟಿ ಮುಂತಾದ ಕಾರಣಗಳಿಂದಾಗಿ ಬೆಳೆ ಹಾನಿಗೊಳಗಾದ ಸಂತ್ರಸ್ಥ ರೈತರಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ದೊರೆಯದಿರುವ ಸಾಧ್ಯತೆ ಇದೆ. ಕೂಡಲೇ ಸಂತ್ರಸ್ಥ ರೈತರಿಗೆ ವಿಮಾ ಮೊತ್ತವನ್ನು ಬಿಡುಗಡೆ ಮಾಡಲು ಅನುಕೂಲವಾಗುವಂತೆ ಮಳೆಮಾಪಕಗಳನ್ನು ದುರಸ್ತಿಗೊಳಿಸಬೇಕು. ನಿರ್ಲಕ್ಷ್ಯ ವಹಿಸುವ ಮಳೆಮಾಪಕ ನಿರ್ವಾಹಕ ಸಂಸ್ಥೆಯ ವಿರುದ್ಧ ಕೈಗೊಳ್ಳುವಂತೆ ಆರಗ ಜ್ಞಾನೇಂದ್ರ ಅವರು ಸಚಿವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ತೋಟಗಾರಿಕೆ ಬೆಳೆ ಹಾನಿಗೊಳಗಾದ ಜಿಲ್ಲೆಯ ೭೩೧೭೭ಮಂದಿ ರೈತರಿಗೆ ವಿಮಾ ಮೊತ್ತ ಬಿಡುಗಡೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಸುನಿತಾ ಅವರು ಸಭೆಗೆ ಮಾಹಿತಿ ನೀಡಿದರು.


ಕಂದು ಜಿಗಿಹುಳು ನಿಯಂತ್ರಣಕ್ಕೆ ಕ್ರಮ ವಹಿಸಿ, ಕಂದಾಯ ಇಲಾಖೆಯು ನಿರ್ವಹಿಸುತ್ತಿರುವ ಪಹಣಿಯಲ್ಲಿ ಬೆಳೆ ದಾಖಲಾಗುತ್ತಿಲ್ಲ. ಇದರಿಂದಾಗಿ ರೈತರಿಗೆ ಅತೀವ ತೊಂದರೆಯಾಗುತ್ತಿದೆ. ಬಹುಗ್ರಾಮ ಯೋಜನೆಯಡಿ ನೀರನ್ನು ಪೂರೈಸಲು ಅರಣ್ಯ ಇಲಾಖೆಯಿಂದ ತೀವ್ರತರಹದ ಅಡಚಣೆ ಉಂಟಾಗುತ್ತಿದೆ. ಸಮಸ್ಯೆಯ ತೀವ್ರತೆಯನ್ನು ಅರಿತು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಆರಗ ಜ್ಞಾನೇಂದ್ರ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇರುವ ಅರಣ್ಯ ಇಲಾಖೆಯ ೫೮ ಪ್ರದೇಶಗಳಲ್ಲಿ ಈಗಾಗಲೇ ೪೦ಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದವುಗಳನ್ನೂ ಕೂಡಲೇ ಇತ್ಯರ್ಥಪಡಿಸಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ನಿಯಮಾನುಸಾರ ಅಲಿನೇಶನ್ ನಂತರ ಕಂದಾಯ ಭೂಮಿ ವಸತಿ ಉದ್ದೇಶಕ್ಕಾಗಿ ಪರಿವರ್ತನೆಗೊಂಡಿದ್ದರೂ ಸರ್ಕಾರಿ ದಾSಲೆಗಳಲ್ಲಿ ಇನ್ನೂ ಯಾವುದೇ ಬದಲಾವಣೆಗಳಾಗದಿರುವುದು ಆತಂಕಕಾರಿ ಬೆಳವಣಿಗೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಯಪ್ರವೃತ್ತರಾಗಬೇಕು. ನಗರದಲ್ಲಿನ ಮುಜರಾಯಿ ಹಾಗೂ ಖಾಸಗಿ ದೇವಸ್ಥಾನಗಳ ಆಸ್ತಿಯ ಕುರಿತು ಸರ್ಕಾರಿ ದಾಖಲೆಗಳಲ್ಲಿ ಅಳತೆ ನಮೂದಾಗಿರುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮವಹಿಸುವಂತೆ ಸೂಚಿಸಿದರು.
ಶಾಸಕಿ ಶ್ರೀಮತಿ ಶಾರದಾಪೂರ್ಯಾನಾಯಕ್ ಅವರು ಮಾತನಾಡಿ, ಕಾಡಾನೆಗಳು ಗ್ರಾಮೀಣ ಪ್ರದೇಶಕ್ಕೆ ನುಗ್ಗಿ ಬೆಳೆಗಳನ್ನು ನಿರಂತರ ಹಾಳು ಮಾಡುತ್ತಿವೆ. ಅಲ್ಲದೇ ಅವು ಹಗಲಲ್ಲಿ ರಸ್ತೆಗಿಳಿಯುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿವೆ. ಕೂಡಲೇ ಅರಣ್ಯಾಧಿಕಾರಿಗಳು ಈ ಆನೆಗಳನ್ನು ಗಡಿದಾಟಿಸಬೇಕು ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸಿ, ವಿದ್ಯಾಭ್ಯಾಸ ಪಡೆದುಕೊಳ್ಳಲು ಕ.ರಾ.ರ.ಸಾರಿಗೆ ನಿಗಮ ಬಸ್‌ಗಳು ಸಕಾಲದಲ್ಲಿ ಸಂಚರಿಸದೇ ತೀವ್ರತರಹದ ಅಡಚಣೆ ಉಂಟಾಗುತ್ತಿದೆ. ಕೂಡಲೇ ಸಾರಿಗೆ ಇಲಾಖೆ ಜಿಲ್ಲಾ ಅಧಿಕಾರಿಗಳು ಕೂಡಲೇ ಬಸ್ ಸಂಪರ್ಕ ಕಲ್ಪಿಸುವಂತೆ ಅವರು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಅವರು ಮಾತನಾಡಿ, ಆರೋಗ್ಯ ಸೇವೆ ಒದಗಿಸುವ ೧೦೮ ವಾಹನಗಳ ಸಿಬ್ಬಂಧಿ ಮತ್ತು ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳ ನಡುವಿನ ಹೊಂದಾಣಿಕೆಯಿಂದಾಗಿ ರೋಗಿಗಳಿಗೆ ಅತೀವ ತೊಂದರೆ ಆಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಒತ್ತಾಯಿಸಿದರು.
ಸಭೆಯಲ್ಲಿ ಸಚಿವ ಮಧು ಎಸ್.ಬಂಗಾರಪ್ಪ, ಸಾಂಸದ ಬಿ.ವೈ.ರಾಘವೇಂದ್ರ, ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಬಿ.ಬಿ.ಕಾವೇರಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಸ್.ಎನ್.ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಬಲ್ಕಿಶ್‌ಬಾನು, ಡಾ|| ಧನಂಜಯ ಸರ್ಜಿ, ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸೂರಜ್‌ಹೆಗಡೆ, ಎಂ.ಎ.ಡಿ.ಬಿ.ಅಧ್ಯಕ್ಷ ಡಾ|| ಆರ್.ಎಂ.ಮಂಜುನಾಥಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಡಿ.ರಾಮಚಂದ್ರ, ಗ್ಯಾರೆಂಟಿ ಸಮಿತಿಯ ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಚಂದ್ರಭೂಪಾಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಉಪವಿಭಾಗಾಧಿಕಾರಿ ಯತೀಶ್, ಸತ್ಯನಾರಾಯಣ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಭೆಯ ನಾಮನಿರ್ದೇಶಿತ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!